ಬೈರೂತ್: ಭೀಕರ ಸ್ಫೋಟಕ್ಕೆ 100ಕ್ಕೂ ಅಧಿಕ ಬಲಿ; 4 ಸಾವಿರಕ್ಕೂ ಅಧಿಕ ಮಂದಿಗೆ ಗಾಯ

Update: 2020-08-06 04:03 GMT

► ಲೆಬನಾನ್ ರಾಜಧಾನಿ ಅರ್ಧದಷ್ಟು ಭಾಗಕ್ಕೆ ಹಾನಿ

ಬೈರೂತ್,ಆ.5: ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಮಂಗಳವಾರ ಭೀಕರ ಸ್ಫೋಟ ಸಂಭವಿಸಿದ್ದು ರಕ್ತದ ಹೊಳೆಯೇ ಹರಿದಿದೆ. ಮಧ್ಯಪ್ರಾಚ್ಯದ ರಾಷ್ಟ್ರವಾದ ಲೆಬನಾನ್ ಹಿಂದೆಂದೂ ಕಂಡರಿಯದಂತಹ ಈ ಭಯಾನಕ ಸ್ಫೋಟದಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

     ಬೈರೂತ್‌ನ ಬಂದರು ಪ್ರದೇಶದಲ್ಲಿರುವ ಗೋದಾಮೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಅಮೋನಿಯಂ ನೈಟ್ರೆಟ್ ಸಿಡಿದಿದ್ದುದೇ ಸ್ಫೋಟಕ್ಕೆ ಕಾರಣವೆಂದು ಲೆಬನಾನ್‌ನ ಗೃಹ ಸಚಿವ ಮುಹಮ್ಮದ್ ಫಾಹ್‌ಮಿ ತಿಳಿಸಿದ್ದಾರೆ. . ಸ್ಫೋಟದಿಂದಾಗಿ ಆಗಸದೆತ್ತರಕ್ಕೆ ಬೆಂಕಿಯ ಚೆಂಡುಗಳು ಚಿಮ್ಮುತ್ತಿರುವುದು ಕಂಡುಬಂದಿತ್ತು. ಇಡೀ ಬಂದರು ಪ್ರದೇಶ ವಸ್ತುಶಃ ಈಗ ಸ್ಮಶಾನಸದೃಶಗೊಳಿಸಿದೆ ನೂರಾರು ಮನೆಗಳು, ಕಟ್ಟಡಗಳು ನೆಲಸವಾಗಿವೆ. ಸ್ಫೋಟದ ತೀವ್ರತೆಗೆ ಹಲವಾರು ಕಟ್ಟಡಗಳ ಕಿಟಕಿ ಬಾಗಿಲುಗಳು ಹಲವಾರು ಕಿ.ಮೀ. ದೂರದವರೆಗೆ ಎಸೆಯಲ್ಪಟ್ಟಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ಸ್ಥಳದಿಂದ 10 ಕಿ.ಮೀ. ದೂರದಲ್ಲಿರುವ ಕಟ್ಟಡಗಳಿಗೂ ಕೂಡಾ ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ಕುಸಿದುಬಿದ್ದಿರುವ ಕಟ್ಟಡಗಳ ಅವಶೇಷಗಳ ನಡುವೆ ಸಿಲುಕಿಕೊಂಡಿರಬಹುದಾದವರನ್ನು ಪಾರು ಮಾಡಲು ರಕ್ಷಣಾ ಕಾರ್ಯಾಚರಣೆ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸಾವು, ನೋವಿನ ಸಂಖ್ಯೆ ಇನ್ನೂ ಏರುವ ಭೀತಿಯಿದೆಯೆಂದು ಮೂಲಗಳು ಹೇಳಿವೆ.

2500 ಕೆ.ಜಿ. ಅಮೋನಿಯಂ ನೈಟ್ರೇಟ್ ಸ್ಫೋಟದಿಂದಾಗಿ ದುರಂತ: ಲೆಬನಾನ್ ಪ್ರಧಾನಿ

ಲೆಬನಾನ್ ರಾಜಧಾನಿ ಬೈರೂತ್‌ನ ಬಂದರು ಪ್ರದೇಶದ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಸುಮಾರು 2500 ಟನ್ ಅಮೋನಿಯಂ ನೈಟ್ರೋಟ್ ಸ್ಫೋಟಿಸಿದ್ದೇ ದುರಂತಕ್ಕೆ ಕಾರಣವೆಂದು ಪ್ರಧಾನಿ ಹಸನ್ ದಿಯಾಬ್ ತಿಳಿಸಿದ್ದಾರೆ.

 ‘‘ ಗೋದಾಮೊಂದರಲ್ಲಿ ಆರು ವರ್ಷಗಳವರೆಗೆ 2750 ಟನ್ ಅಮೋನಿಯಂ ನೈಟ್ರೇಟ್‌ನ್ನು ಹಡಗು ಸಾಗಣೆಗಾಗಿ ದಾಸ್ತಾನಿಡಲಾಗಿತ್ತು. ಇದು ಸಮ್ಮತಾರ್ಹವಲ್ಲ ಹಾಗೂ ಈ ವಿಷಯದಲ್ಲಿ ನಾವು ಸುಮ್ಮನಿರಲು ಸಾಧ್ಯವಿಲ್ಲವೆಂದು ಹಸನ್ ದಿಯಾಬ್ ಅವರು ರಕ್ಷಣಾ ಮಂಡಳಿಯ ಸಭೆಯಲ್ಲಿ ತಿಳಿಸಿದ್ದಾರೆ.

ರಸ್ತೆಗಲ್ಲಿ ಹಲವು ಶವಗಳು ಚದುರಿಬಿದ್ದಿರುವ ಶವಗಳು ಆಸ್ಪತ್ರೆಗಳಲ್ಲಿ ಗಾಯಾಲುಗಳ ಆಕ್ರಂದನ

ಲೆಬನಾನ್‌ನಲ್ಲಿ ಮಂಗಳವಾರ 100ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಸ್ಪೋಟವು ಎಷ್ಟು ತೀವ್ರವಾಗಿತ್ತೆಂದರೆ ಇಡೀ ನಗರದಲ್ಲಿ ಭೂಕಂಪದ ಅನುಭವವಾಗಿತ್ತು. ಸ್ಫೋಟದಿಂದಾಗಿ ಹಲವಾರು ಮನೆಗಳು, ಕಟ್ಟಡಗಳು ಕುಸಿದುಬಿದ್ದು ಬಿದ್ದಿದ್ದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ನಗರದ ಎಲ್ಲಾ ಆಸ್ಪತ್ರೆಗಳು ಸಾವಿರಾರು ಗಾಯಾಳುಗಳಿಂದ ತುಂಬಿ ತುಳುಕುತ್ತಿದ್ದರೆ, ರಸ್ತೆಗಲ್ಲಿ ಹಲವು ಶವಗಳು ಚದುರಿಬಿದ್ದಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

  ಸ್ಫೋಟದಿಂದಾಗಿ ಬಾಧಿತವಾದ ಹಲವಾರು ವಸತಿ ಪ್ರದೇಶಗಳ ರಸ್ತೆಗಳ ಮಧ್ಯದಲ್ಲಿ ಹೆಣಗಳು ಬಿದ್ದಿರುವುದನ್ನು ತಾನು ಕಂಡಿರುವುದಾಗಿ ಸ್ಥಳೀಯ ನಿವಾಸಿ ಮಾರ್ ಮಿಖೈಲ್ ತಿಳಿಸಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಬಾಲ್ಕನಿ ಹಾಗೂ ತಾರಸಿಗಳಲ್ಲಿದ್ದ ಹಲವಾರು ನೆಲಕ್ಕೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆಂದು ಅವರು ಹೇಳಿದ್ದಾರೆ.

 ಬಂದರಿನಿಲ್ಲಿ ದಾಸ್ತಾನಿರಿಸಿದ್ದ ಅಮೋನಿಯಂ ನೈಟ್ರೇಟ್ ಸ್ಫೋಟಕದ ಸಂಗ್ರಹವು ಸ್ಪೋಟಿಸಿದಾಗ ಅಣಬೆಯಾಕಾರದಲ್ಲಿ ಬೆಂಕಿಯ ಪುಂಜವು ಗಗನಕ್ಕೆ ಚಿಮ್ಮಿತ್ತು. ಈ ಸ್ಪೋಟವು ಭೂಕಂಪದ 3.3 ರಿಕ್ಟರ್ ಮಾಪಕದ ತೀವ್ರತೆಗೆ ಸರಿಸಮಾನವಾಗಿತ್ತು ಎಂದು ಭೂಕಂಪನ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಸ್ಫೋಟದಿಂದಾಗಿ 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರು

ಬೈರೂತ್‌ನಲ್ಲಿ ಮಂಗಳವಾರ ಸಂಭವಿಸಿದ ಸ್ಪೋಟದಿಂದಾಗಿ ಇಡೀ ನಗರದ ಅರ್ಧದಷ್ಟು ಭಾಗ ಹಾನಿಗೀಡಾಗಿದೆ ಹಾಗೂ 3 ಲಕ್ಷಕ್ಕೂ ಅಧಿಕ ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಎಂದು ಬೈರೂತ್ ಗವರ್ನರ್ ತಿಳಿಸಿದ್ದಾರೆ.

   ಈ ಮಧ್ಯೆ ಬೈರೂತ್‌ನ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ ಬುಧವಾರವನ್ನು ರಾಷ್ಟ್ರಾದ್ಯಂತ ಶೋಕಾಚರಣೆಯನ್ನು ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ಘೋಷಿಸಿದ್ದಾರೆ. ಈ ಸಂಕಷ್ಚದ ಸಮಯದಲ್ಲಿ ನೆರವಾಗುವಂತೆ ಅವರು ಮಿತ್ರರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.

  ಭೀಕರ ಸ್ಫೋಟದ ಹೊಗೆ,ಬೆಂಕಿಯ ಜ್ವಾಲೆಗಳು ಹಾಗೂ ವಿನಾಶದ ನಡುವೆಯೂ ಧೃತಿಗೆಡದೆ ನೆರವಿಗಾಗಿ ಸ್ಫೋಟದ ಸ್ಥಳಕ್ಕೆ ಹಾಗೂ ಆಸ್ಪತ್ರೆಗಳಲ್ಲಿ ರೋಗಿಗಳ ನೆರವಿಗಾಗಿ ಧಾವಿಸಿದ ಲೆಬನಾನ್ ಜನತೆಯ ತಾನು ಅಭಿಂದಿಸುವುದಾಗಿ ಅವರು ಹೇಳಿದರು.

ವಿಧ್ವಂಸಕ ಕೃತ್ಯ: ಟ್ರಂಪ್ ಶಂಕೆ

ಬೈರೂತ್‌ನಲ್ಲಿ ಮಂಗಳವಾರ ನಡೆದ ಸ್ಫೋಟವು ವಿಧ್ವಂಸಕ ಕೃತ್ಯವೆಂದು ಲೆಬನಾನ್ ಸರಕಾರ ಹೇಳಿಕೆ ನೀಡಿಲ್ಲವಾದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಘಟನೆ ಒಂದು ಬಾಂಬ್ ದಾಳಿಯಾಗಿದೆ ಎಂದು ಹೇಳಿ ದ್ದಾರೆ. ‘‘ ನಮ್ಮ ಕೆಲವು ಮಹಾನ್ ಜನರಲ್‌ಗಳನ್ನು ನಾನು ಭೇಟಿಯಾಗಿದ್ದೇನೆ ಅವರು ಇದೊಂದು ದಾಳಿ ಆಗಿರುವಂತೆ ಕಂಡುಬರುತ್ತಿದೆಯೆಂದು ಟ್ರಂಪ್ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ‘‘ ಇದೊಂದು ಸ್ಫೋಟಕಗಳ ತಯಾರಿಕೆ ವೇಳೆ ಆಕಸ್ಮಿಕವಾಗಿ ನಡೆದ ಸ್ಫೋಟದಂತೆ ಕಾಣುತ್ತಿಲ್ಲ. ಇದೊಂದು ದಾಳಿಯೆಂದು ಅಮೆರಿಕದ ಸೇನಾಧಿಕಾರಿಗಳು ಭಾವಿಸುತ್ತಿದ್ದಾರೆ. ಇದೊಂದು ಬಗೆಯ ಬಾಂಬ್ ಆಗಿದೆ ಎಂದು ಅವರು ಹೇಳಿದ್ದಾರೆ.

ಮೋದಿ ಸಂತಾಪ

ಬೈರೂತ್‌ನಲ್ಲಿ ನಡೆದ ಭೀಕರ ಸ್ಫೋಟದ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ. ‘‘ ಭಾರೀ ಜೀವ ಹಾಗೂ ಸೊತ್ತುಗಳ ನಾಶಕ್ಕೆ ಕಾರಣವಾದ ಬೈರೂತ್ ನಗರದಲ್ಲಿ ನಡೆದ ಭಾರೀ ಸ್ಫೋಟದಿಂದ ಆಗಾತವಾಗಿ ಹಾಗೂ ವಿಷಾದವಾಗಿದೆ ಎಂದು ಮೋದಿ ಟ್ವೀಟಿಸಿದ್ದಾರೆ. ಸ್ಫೋಟದಿಂದ ಸಂತ್ರಸ್ತ ಕುಟುಂಬಗಳ ದುಃಖದಲ್ಲಿ ಭಾರತೀಯರು ಸಹಭಾಗಿಗಳಾಗುವುದಾಗಿ ಅವರು ಹೇಳಿದ್ದಾರೆ.

 ವಿಶ್ವದಾದ್ಯಂತ ಶೋಕ,ದಿಗ್ಭ್ರಮೆ,

  ಬೈರೂತ್‌ನಲ್ಲಿ ಮಂಗಳವಾರ ನಡೆದ ಭೀಕರ ಸ್ಪೋಟಕ್ಕೆ ವಿಶ್ವದಾದ್ಯಂತ ದಿಗ್ಭ್ರಮೆ, ಸಂತಾಪ ವ್ಯಕ್ತವಾಗಿದೆ ಹಾಗೂ ಈ ಭೀಕರ ದುರಂತದಿಂದ ತತ್ತರಿಸಿರುವ ಲೆಬನಾನ್‌ಗೆ ವಿವಿಧ ದೇಶಗಳು ನೆರವಿನ ಕೊಡುಗೆಯನ್ನು ನೀಡಿವೆ.

 ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಕೂಡಾ ಸಂತ್ರಸ್ತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗೂ ಘಟನೆಯಲ್ಲಿ ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿದೆಂದು ಅವರು ಹಾರೈಸಿದ್ದಾರೆ.

ಬೈರೂತ್ ಸ್ಫೋಟದ ಗಾಯಾಳುಗಳಿಗೆ ವೈದ್ಯಕೀಯ ನೆರವನ್ನು ಒದಗಿಸಲು ಗಲ್ಫ್ ರಾಷ್ಟ್ರವಾದ ಕತರ್ ಮುಂದೆ ಬಂದಿದೆ. ಗಾಯಾಳುಗಳ ಚಿಕಿತ್ಸೆಗಾಗಿ ಕ್ಷೇತ್ರೀಯ ಆಸ್ಪತ್ರೆಗಳನ್ನು (ಫೀಲ್ಡ್ ಹಾಸ್ಪಿಟಲ್ಸ್) ಕಳುಹಿಸುವುದಾಗಿ ಅದು ಹೇಳಿದೆ.

   ಸ್ಪೋಟದಿಂದ ತತ್ತರಿಸಿರುವ ಲೆಬನಾನ್‌ಗೆ ಯಾವುದೇ ರೀತಿಯ ನೆರವನ್ನು ನೀಡಲು ಸಿದ್ಧವಿರುವುದಾಗಿ ಜೋರ್ಡಾನ್ ಪ್ರಧಾನಿ ಆಯ್‌ಮಾನ್ ಸಫ್ದಾರಿ ತಿಳಿಸಿದ್ದಾರೆ. ಸಿರಿಯದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಹಾಗೂ ಯುಎಇ ಉಪಾಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಖ್ತೂಮ್ ಅವರು ಕೂಡಾ ಸಂತ್ರಸ್ತ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಲೆಬನಾನ್ ಜೊತೆ ಅಧಿಕೃತವಾಗಿ ಯುದ್ಧ ಘೋಷಿಸಿರುವ ಇಸ್ರೇಲ್ ಕೂಡಾ ಆ ದೇಶಕ್ಕೆ ವೈದ್ಯಕೀಯ ಹಾಗೂ ಮಾನವೀಯ ನೆರವನ್ನು ನೀಡಲು ಮುಂದೆ ಬಂದಿದೆ.

 ಲೆಬನಾನ್ ಪ್ರಜೆಗಳ ನೋವಿನಲ್ಲಿ ರಶ್ಯನ್ನರು ಕೂಡಾ ಸಹಭಾಗಿಗಳಾಗುವುದಾಗಿ ರಶ್ಯ ಅಧ್ಯಕ್ಶ ವ್ಲಾದಿಮಿರ್ ಪುಟಿನ್ ಘೋಷಿಸಿದ್ದಾರೆ. ಬೈರೂತ್ ಸ್ಫೋಟದಲ್ಲಿ ಬಾಧಿತರಾದ ಬ್ರಿಟನ್ ರಾಷ್ಟ್ರೀಯರು ಸೇರಿದಂತೆ ಸಂತ್ರಸ್ತರಿಗೆ ನೆರವು ನೀಡಲು ಬ್ರಿಟನ್ ಸಿದ್ಧವಿರುವುದಾಗಿ ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News