ಮಂಗಳೂರು: ಭೂಮಿ ಪೂಜೆಯ ಭಜನಾ ಕಾರ್ಯಕ್ರಮ

Update: 2020-08-05 17:27 GMT

ಮಂಗಳೂರು, ಆ.5: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬುಧವಾರ ನಡೆದ ಭೂಮಿಪೂಜೆಯ ಹಿನ್ನೆಲೆಯಲ್ಲಿ ನಗರದ ಹಲವು ಕಡೆ ಭಜನೆ, ಪ್ರಾರ್ಥನಾ ಕಾರ್ಯಕ್ರಮ ಜರುಗಿತು.

ನಗರದ ಕದ್ರಿಯಲ್ಲಿರುವ ವಿಶ್ವಹಿಂದೂ ಪರಿಷತ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಭಜನೆ ಹಾಡಿ ಚಪ್ಪಾಳೆಯ ತಾಳ ಹಾಕಿದರು. ಶಾಸಕ ವೇದವ್ಯಾಸ ಕಾಮತ್ ಮತ್ತಿತರರು ತಬಲಾ ನುಡಿಸಿದರು. ಬಳಿಕ ಕರಸೇವಕರಿಗೆ ಗೌರವಾರ್ಪಣೆ ಮಾಡಲಾಯಿತು.

ಭೂಮಿ ಪೂಜೆಯ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿಯಿಂದ ಗುರುವಾರ ಬೆಳಗ್ಗಿ ನವರೆಗೆ ಸೆ.144ನ್ನು ಜಾರಿಗೊಳಿಸಲಾಗಿದೆ. ಆದರೆ, ಬುಧವಾರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಸೆ.144 ಉಲ್ಲಂಘಿಸಿ ಸಂಭ್ರಮ ಆಚರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಗರದ ವೆಂಕಟ್ರಮಣ ದೇವಸ್ಥಾನದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಬಲೂನ್ ಹಾರಿಸಿ ಸಂಭ್ರಮಿಸಿದರು. ಗುರುಪುರ ಜಂಗಮ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಉತ್ತರ ಮಂಡಲ ಯುವ ಮೋರ್ಚಾ ವತಿಯಿಂದ ಶ್ರೀರಾಮಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಕರಸೇವೆಯಲ್ಲಿ ಗುರುಪುರದಿಂದ ಪಾಲ್ಗೊಂಡಿದ್ದ ಪುರಂದರ ಮಲ್ಲಿ, ರಮಾನಂದ ಶೆಟ್ಟಿ, ಹರೀಶ್ ಶೆಟ್ಟಿ ಏತಮೊಗರುಗುತ್ತು, ರವಿ ಶೆಟ್ಟಿಗಾರ ಗುರುಪುರ, ಯೋಗೀಶ್ ಆಚಾರ್ಯ, ರಾಜೇಂದ್ರ ನಾಯಕ್, ಕುಮಾರಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಉಪಾಧ್ಯಕ್ಷೆ ಅಮೃತಲಾಲ್ ಡಿಸೋಜ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅಥಿಕಾರಿ, ಯುವ ಮೋರ್ಚಾ ಉಪಾಧ್ಯಕ್ಷ ಸಂದೇಶ್ ಜಿಕೆ, ಉಪಾಧ್ಯಕ್ಷ ಸೋಮಯ್ಯ, ಥಾಮಸ್ ಕೈಕಂಬ, ತಮ್ಮಯ್ಯ ಪೂಜಾರಿ ಮಳಲಿ, ರಾಜೇಶ್ ಸುವರ್ಣ ಗುರುಪುರ, ಶ್ರೀಕರ ಶೆಟ್ಟಿ, ಮಾಧವ ಕಾಜಿಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News