ಅಧಿಕಾರಕ್ಕೆ ಬಂದರೆ ಗ್ರೀನ್ ಕಾರ್ಡ್, ಎಚ್-1ಬಿ ಮೇಲಿನ ನಿರ್ಬಂಧಗಳ ತೆರವು: ಡೆಮಾಕ್ರಟಿಕ್ ಪಕ್ಷ ಘೋಷಣೆ

Update: 2020-08-05 17:29 GMT

ವಾಶಿಂಗ್ಟನ್, ಆ. 5: ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಡೆಮಾಕ್ರಟಿಕ್ ಪಕ್ಷವು, ಗ್ರೀನ್ ಕಾರ್ಡ್‌ಗಳ ವಿತರಣೆಯ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ವಿಧಿಸಿರುವ ನಿಷೇಧವನ್ನು ತೆರವುಗೊಳಿಸುತ್ತದೆ ಹಾಗೂ ಬ್ಯಾಕ್‌ಲಾಗ್ (ಹಿಂದಿನ ಬಾಕಿ)ನ್ನು ಸಂಪೂರ್ಣವಾಗಿ ವಿಲೇವಾರಿಗೊಳಿಸುತ್ತದೆ ಎಂದು ಪಕ್ಷದ ಪ್ರಸ್ತಾಪಿತ ಚುನಾವಣಾ ಪ್ರಣಾಳಿಕೆ ತಿಳಿಸಿದೆ.

ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಹೊಂದಿರುವ ವಲಸಿಗರು ಆ ದೇಶದಲ್ಲಿ ಖಾಯಂ ಆಗಿ ವಾಸಿಸಬಹುದಾಗಿದೆ.

ಎಚ್-1ಬಿ ವೀಸಾಗಳ ವಿತರಣೆಯ ಮೇಲೆ ಟ್ರಂಪ್ ಆಡಳಿತವು ತಾತ್ಕಾಲಿಕವಾಗಿ ವಿಧಿಸಿರುವ ನಿರ್ಬಂಧಕ್ಕೂ ಡೆಮಾಕ್ರಟಿಕ್ ಪ್ರಣಾಳಿಕೆಯು ವಿರೋಧ ವ್ಯಕ್ತಪಡಿಸಿದೆ. ಅತ್ಯಂತ ಹೆಚ್ಚು ತಾಂತ್ರಿಕ ಪರಿಣತಿಯನ್ನು ಹೊಂದಿರುವ ವಲಸಿಗರಿಗೆ ಅಮೆರಿಕದಲ್ಲಿ ನಿರ್ದಿಷ್ಟ ವಿಶೇಷ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಎಚ್-1ಬಿ ವೀಸಾ ಅವಕಾಶ ನೀಡುತ್ತದೆ. ಈ ವೀಸಾಗಳ ಆಧಾರದಲ್ಲಿ ಅಮೆರಿಕದ ತಂತ್ರಜ್ಞಾನ ಕಂಪೆನಿಗಳು ಭಾರತ ಮತ್ತು ಚೀನಾಗಳ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ.

ಈ ಚುನಾವಣಾ ಪ್ರಣಾಳಿಕೆಯನ್ನು ಆಗಸ್ಟ್ 17ರಿಂದ 20ರವರೆಗೆ ವಿಸ್ಕೋನ್‌ಸಿನ್‌ನಲ್ಲಿ ನಡೆಯಲಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅದರ ಪ್ರತಿನಿಧಿಗಳು ಅಂಗೀಕರಿಸಲಿದ್ದಾರೆ.

ಭಾರತದೊಂದಿಗಿನ ರಕ್ಷಣಾ ಭಾಗೀದಾರಿಕೆಯಲ್ಲಿ ಹೂಡಿಕೆ ಮುಂದುವರಿಕೆ: ಜೋ ಬೈಡನ್ ಚುನಾವಣಾ ಭರವಸೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್ ವಿಜಯಿಯಾದರೆ, ಅವರ ಆಡಳಿತವು ಭಾರತದೊಂದಿಗಿನ ರಕ್ಷಣಾ ಭಾಗೀದಾರಿಕೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತದೆ ಎಂದು ಪಕ್ಷದ 2020ರ ಚುನಾವಣಾ ಪ್ರಣಾಳಿಕೆ ಹೇಳಿದೆ.

‘‘ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆ, ವೈವಿಧ್ಯತೆಗಳನ್ನೊಳಗೊಂಡ ಶ್ರೇಷ್ಠ ದೇಶ ಹಾಗೂ ಬೆಳೆಯುತ್ತಿರುವ ಏಶ್ಯ-ಪೆಸಿಫಿಕ್ ಶಕ್ತಿಯಾಗಿರುವ ಭಾರತದೊಂದಿಗಿನ ರಕ್ಷಣಾ ಭಾಗೀದಾರಿಕೆಯಲ್ಲಿ ಹೂಡಿಕೆ ಮಾಡುವುದನ್ನು ನಾವು ಮುಂದುವರಿಸುತ್ತೇವೆ’’ ಎಂದು ಪಕ್ಷದ ಪ್ರಸ್ತಾಪಿತ ಚುನಾವಣಾ ಪ್ರಣಾಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News