ಕೆಲವೇ ತಿಂಗಳಲ್ಲಿ ಜಗತ್ತಿಗೆ ಶುಭ ಸುದ್ದಿ: ಇಸ್ರೇಲ್

Update: 2020-08-05 18:33 GMT

ಜೆರುಸಲೇಮ್, ಆ. 5: ಕೋವಿಡ್-19ನ್ನು ಪತ್ತೆಹಚ್ಚುವ ಕ್ಷಿಪ್ರ ಪರೀಕ್ಷಾ ವಿಧಾನವೊಂದನ್ನು ಅಭಿವೃದ್ಧಿಪಡಿಸುವಲ್ಲಿ ಭಾರತ ನೀಡಿರುವ ‘ಅಮೋಘ’ ಬೆಂಬಲಕ್ಕೆ ಇಸ್ರೇಲ್ ಬುಧವಾರ ಮೆಚ್ಚುಗೆ ವ್ಯಕ್ತಪಡಿಸಿದೆ ಹಾಗೂ ಇಸ್ರೇಲ್ ಮತ್ತು ಭಾರತಗಳ ಜಂಟಿ ಪ್ರಯತ್ನಗಳು ಕೆಲವೇ ತಿಂಗಳಲ್ಲಿ ಜಗತ್ತಿಗೆ ‘ಶುಭ ಸುದ್ದಿ’ಯನ್ನು ತರಬಹುದಾಗಿದೆ ಎಂದು ಹೇಳಿದೆ.

ಹತ್ತಾರು ಸೆಕೆಂಡ್‌ಗಳಲ್ಲೇ ಫಲಿತಾಂಶ ನೀಡುವ ಕ್ಷಿಪ್ರ ಕೊರೋನ ಪರೀಕ್ಷಾ ವಿಧಾನವೊಂದನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದರಲ್ಲಿ ಇಸ್ರೇಲ್ ಮತ್ತು ಭಾರತದ ವಿಜ್ಞಾನಿಗಳು ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಇಸ್ರೇಲ್‌ನ ನಾಲ್ಕು ಕಾಯಿಲೆ ಪತ್ತೆಹಚ್ಚುವ ತಂತ್ರಜ್ಞಾನಗಳನ್ನು ಪರೀಕ್ಷೆಗೆ ಒಡ್ಡುವುದಕ್ಕಾಗಿ ಮಾದರಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಇಸ್ರೇಲ್‌ನ ರಕ್ಷಣಾ ಸಚಿವಾಲಯದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶನಾಲಯ ಮತ್ತು ವಿದೇಶ ವ್ಯವಹಾರಗಳ ಸಚಿವಾಲಯಗಳು ಪೂರ್ಣಗೊಳಿಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಈ ಯೋಜನೆಯಲ್ಲಿ ಭಾರತ ನೀಡುತ್ತಿರುವ ಬೆಂಬಲವು ಅದ್ಭುತವಾಗಿದೆ. ಪ್ರಧಾನಿ ನರೇಂದ್ರ ಮೋದಿಯ ವೈಜ್ಞಾನಿಕ ಸಲಹೆಗಾರ ಸೇರಿದಂತೆ ಎಲ್ಲ ಸಂಸೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳು ಈ ಯೋಜನೆಯಲ್ಲಿ ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿವೆ. ಇನ್ನು ಕೆಲವೇ ತಿಂಗಳುಗಳಲ್ಲಿ ಜಗತ್ತಿಗೆ ಶುಭ ಸುದ್ದಿಯೊಂದನ್ನು ತರಲು ನಮಗೆ ಸಾಧ್ಯವಾಗಲಿದೆ ಎಂಬ ವಿಶ್ವಾಸವಿದೆ’’ ಎಂದು ಇಸ್ರೇಲ್ ರಕ್ಷಣಾ ಇಲಾಖೆಯಲ್ಲಿ ಭಾರತೀಯ ವ್ಯವಹಾರಗಳ ಉಸ್ತುವಾರಿ ಕರ್ನಲ್ ಅಸಫ್ ಮಲ್ಲರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News