ಕೊರೋನ ಭೀತಿ: ಇಂದಿನಿಂದ ಮಧ್ಯಾಹ್ನದ ಬಳಿಕ ಕಾಪು ಪೇಟೆ ಬಂದ್

Update: 2020-08-06 12:32 GMT

ಕಾಪು, ಆ.6: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಮತ್ತು ವರ್ತಕರ ಹಿತದೃಷ್ಟಿ ಯಿಂದ ಆ.7ರಿಂದ ಆ.14ರವರೆಗೆ ಬೆಳಗ್ಗೆಯಿಂದ ಮಧ್ಯಾಹ್ನ ಒಂದು ಗಂಟೆ ವರೆಗೆ ವ್ಯವಹಾರ ನಡೆಸಿ, ಉಳಿದ ಅವಧಿ ಸಂಪೂರ್ಣ ಬಂದ್ ಮಾಡಲು ಕಾಪು ಪೇಟೆಯ ವರ್ತಕರು ನಿರ್ಧರಿಸಿದ್ದಾರೆ.

ಕಾಪು ಪೇಟೆ ಮತ್ತು ಮಾರ್ಕೆಟ್ ವ್ಯಾಪ್ತಿಯ ಇಬ್ಬರು ವರ್ತಕರು ಕೋವಿಡ್ -19ಗೆ ಬಲಿಯಾಗಿದ್ದು, ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಬುಧವಾರ ಮಾರ್ಕೆಟ್‌ನ್ನು ಸಂಪೂರ್ಣ ಸ್ಯಾನಟೈಸ್ ಮಾಡಿ, ಗುರುವಾರ ಮಾರ್ಕೆಟ್ನಲ್ಲಿ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು.

ಈ ಬಗ್ಗೆ ಇಂದು ಸಭೆ ಸೇರಿ ಸಮಾಲೋಚನೆ ನಡೆಸಿದ ವರ್ತಕರು ಮತ್ತು ಜನಪ್ರತಿನಿಧಿಗಳು, ಬಳಿಕ ಜೊತೆಗೂಡಿ ಕಾಪು ಪೇಟೆಯ ಎಲ್ಲ ಅಂಗಡಿ, ವ್ಯಾಪಾರ ಮಳಿಗೆ, ವಾಣಿಜ್ಯ ಮಳಿಗೆ, ಆರ್ಥಿಕ ಸಂಸ್ಥೆಗಳು, ರಿಕ್ಷಾ, ಕಾರು, ಟೆಂಪೋ ವಾಹನ ಚಾಲಕರು ಮತ್ತು ಮಾಲಕರ ಬಳಿಗೆ ತೆರಳಿ ಸ್ವಯಂ ಪ್ರೇರಿತಾಗಿ ನಿಗದಿತ ಅವಧಿಯೊಳಗಿನ ವ್ಯವಹಾರ ನಡೆಸುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

‘ನಮ್ಮ ಮನವಿಗೆ ಎಲ್ಲ ಅಂಗಡಿಗಳ ಮಾಲಕರು ಸಮ್ಮತಿ ವ್ಯಕ್ತಪಡಿಸಿದ್ದಾರೆ. ಅದರಂತೆ ಆ.7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಕಾಪು ಪೇಟೆ ತೆರೆದಿರುತ್ತದೆ. ಬಂದ್ ಅವಧಿಯಲ್ಲಿ ಎರಡು ದಿನಗಳಿಗೊಮ್ಮೆ ಕಾಪು ಪೇಟೆ ಯನ್ನು ಸಂಪೂರ್ಣ ಸ್ಯಾನಟೈಸ್ ಮಾಡಲಾಗುವುದು ಎಂದು ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು ತಿಳಿಸಿದ್ದಾರೆ.

ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಕೆ.ಎಚ್.ಉಸ್ಮಾನ್, ಕಿರಣ್ ಆಳ್ವ, ಮಹಮ್ಮದ್ ಇಮ್ರಾನ್, ರಮೇಶ್ ಹೆಗ್ಡೆ, ಸುರೇಶ್ ದೇವಾಡಿಗ, ಶಾಬು ಸಾಹೇಬ್, ಮೋಹಿನಿ ಶೆಟ್ಟಿ, ಶಾಂಭವಿ ಕುಲಾಲ್, ಸುಲೋಚನಾ ಬಂಗೇರ, ಗುಲಾಬಿ ಪಾಲನ್, ಶಾಂತಲತಾ ಶೆಟ್ಟಿ, ಕಾಪು ವರ್ತಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ರೈ, ರಾಮ್ ನಾಯಕ್, ಪ್ರದೀಪ್ ಕುಮಾರ್, ದೇವರಾಜ್ ಕೋಟ್ಯಾನ್, ಜಗದೀಶ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.

ಮೀನುಗಾರ ಮಹಿಳೆಯರಿಂದ ಬೆಂಬಲ

ಕೊರೋನ ಹಿನ್ನೆಲೆಯಲ್ಲಿ ಕಾಪು ಮಾರ್ಕೆಟ್ನಲ್ಲಿ ಜನಸಂದಣಿ ಹೆಚ್ಚಾಗುವು ದನ್ನು ತಡೆಯುವುದಕ್ಕಾಗಿ ಮೀನುಗಾರ ಮಹಿಳೆಯರು ಇಂದಿನಿಂದಲೇ ಒಂದು ವಾರ ಕಾಲ ಕಾಪು ಮಾರ್ಕೆಟ್ನೊಳಗೆ ಮೀನು ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News