ದ.ಕ. ಜಿಲ್ಲೆಯಲ್ಲಿ ಹೊಸದಾಗಿ 173 ಮಂದಿಗೆ ಕೊರೋನ ಸೋಂಕು, ಒಂದೇ ದಿನ 11 ಬಲಿ

Update: 2020-08-06 15:10 GMT

ಮಂಗಳೂರು, ಆ. 6: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಒಂದೇದಿನ 11 ಮಂದಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 201ಕ್ಕೆ ತಲುಪಿದೆ. ಗುರುವಾರ ಹೊಸದಾಗಿ 173 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಹೊಸದಾಗಿ ಸೋಂಕು ಪತ್ತೆಯಾದವರ ಸಂಖ್ಯೆ ಕೊಂಚ ಇಳಿಕೆಯಾಗಿದ್ದರೂ ಸಾವಿನ ಸಂಖ್ಯೆ ಗಣನೀಯವಾಗಿಯೇ ಹೆಚ್ಚುತ್ತಿದೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 11 ಮಂದಿ ಕೊರೋನ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪೈಕಿ ಆರು ಮಂದಿ ಮಂಗಳೂರು ತಾಲೂಕಿನವರೇ ಆಗಿದ್ದರೆ, ಬಂಟ್ವಾಳದ ಇಬ್ಬರು, ಹೊರಜಿಲ್ಲೆಯ ಮೂವರು ಮೃತಪಟ್ಟಿದ್ದಾರೆ. ಇವರೆಲ್ಲರೂ ಕೊರೋನ ಸೋಂಕಿನ ಜತೆಗೆ ಇತರ ಗಂಭೀರ ಕಾಯಿಲೆಗಳಿಂದಲೂ ಬಳಲುತ್ತಿದ್ದರು ಎಂದು ಜಿಲ್ಲಾ ಆರೋಗ್ಯ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

179 ಮಂದಿಗೆ ಸೋಂಕು: ಹೊಸದಾಗಿ ಸೋಂಕು ಪತ್ತೆಯಾದ 179 ಮಂದಿಯಲ್ಲಿ ಮಂಗಳೂರು ತಾಲೂಕಿನವರು 119 ಜನ. ಉಳಿದಂತೆ ಬಂಟ್ವಾಳದ 21 ಮಂದಿ, ಪುತ್ತೂರಿನ 13, ಸುಳ್ಯದ ಐವರು, ಬೆಳ್ತಂಗಡಿ ಹಾಗೂ ಮೂಡುಬಿದಿರೆಯ ತಲಾ ನಾಲ್ವರು, ಕಡಬದ ಇಬ್ಬರು, ಮುಲ್ಕಿಯ ಓರ್ವ ಸೇರಿದಂತೆ ಹೊರಜಿಲ್ಲೆಯ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ 6,715ಕ್ಕೆ ಏರಿಕೆ ಕಂಡಿದೆ.

ಗುರುವಾರ ದೃಢಪಟ್ಟ ಸೋಂಕಿತರ ಪೈಕಿ ಶೀತ ಲಕ್ಷಣ ಹೊಂದಿರುವವರ ಸಂಖ್ಯೆಯೇ (83)ಅಧಿಕವಿದೆ. ಇನ್ನು ಸೋಂಕು ಯಾರಿಂದ ಹರಡಿದೆ ಎನ್ನುವುದೇ ತಿಳಿಯದ 50 ಮಂದಿ, ತೀವ್ರ ಉಸಿರಾಟ ತೊಂದರೆ-13, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 23, ವಿದೇಶದಿಂದ ಆಗಮಿಸಿದ್ದ ನಾಲ್ವರಲ್ಲಿ ಸೋಂಕು ಇರುವುದು ಖಚಿತಗೊಂಡಿದೆ.

107 ಮಂದಿ ಗುಣಮುಖ: ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳು, ಆರೈಕೆ ಕೇಂದ್ರ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಗುರುವಾರ 107 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನದಿಂದ ಗುಣಮುಖರಾದವರ ಸಂಖ್ಯೆ 3,116ಕ್ಕೆ ಏರಿದೆ. ಜಿಲ್ಲೆಯಲ್ಲಿ 3,398 ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News