ಲೆಬನಾನ್ ಸ್ಫೋಟದಂತಹ ಅಪಾಯ ಎದುರಿಸುತ್ತಿರುವ ಚೆನ್ನೈ!

Update: 2020-08-06 15:37 GMT

ಚೆನ್ನೈ,ಆ.6: ಲೆಬನಾನ್ ರಾಜಧಾನಿ ಬೈರೂತ್‌ನಂತೆ ಚೆನ್ನೈ ಕೂಡ ಟೈಂ ಬಾಂಬ್ ಮೇಲೆ ಕುಳಿತಿರಬಹುದು, ಏಕೆಂದರೆ ಚೆನ್ನೈ ಬಂದರಿಗೆ ಸಮೀಪವೇ ಸುಮಾರು 740 ಟನ್ ಅಮೋನಿಯಂ ನೈಟ್ರೇಟ್‌ನ್ನು ದಾಸ್ತಾನಿಟ್ಟಿರುವುದು ಪತ್ತೆಯಾಗಿದೆ.

ಆಡಳಿತಾರೂಢ ಎಐಎಡಿಎಂಕೆಯ ಮಿತ್ರಪಕ್ಷ ಪಿಎಂಕೆಯ ಮುಖ್ಯಸ್ಥ ಡಾ.ಎಸ್.ರಾಮದಾಸ್ ಅವರು ಗುರುವಾರ ಈ ಆತಂಕಕಾರಿ ವಿಷಯವನ್ನು ತಮಿಳುನಾಡು ಸರಕಾರದ ಗಮನಕ್ಕೆ ತಂದಿದ್ದಾರೆ.

ಆ.4ರಂದು ಬೈರೂತ್ ಬಂದರಿನಲ್ಲಿಯ ಗೋದಾಮೊಂದರಲ್ಲಿ ದಾಸ್ತಾನಿರಿಸಲಾಗಿದ್ದ ಸುಮಾರು 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡು 135ಕ್ಕೂ ಅಧಿಕ ಜನರು ಮೃತಪಟ್ಟಿದ್ದು,ಸಾವಿರಾರು ಜನರು ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.

ಚೆನ್ನೈ ಬಂದರು ಸಮೀಪದ ಗೋದಾಮೊಂದರಲ್ಲಿ ಸುಮಾರು 740 ಟನ್‌ಗಳಷ್ಟು ಸ್ಫೋಟಕ ದಾಸ್ತಾನಿರುವುದು ತನಗೆ ಆಘಾತವನ್ನುಂಟು ಮಾಡಿದೆ. ಬೈರೂತ್‌ನಲ್ಲಿ ಸಂಭವಿಸಿದ್ದ ಭಾರೀ ಸ್ಫೋಟಕ್ಕೂ ಇದೇ ರಾಸಾಯನಿಕವು ಕಾರಣವಾಗಿತ್ತು. ಇಂತಹ ದುರಂತ ಸಂಭವಿಸುವುದನ್ನು ತಡೆಯಲು ಈ ರಾಸಾಯನಿಕವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು ಮತ್ತು ರಸಗೊಬ್ಬರ ಇತ್ಯಾದಿಗಳ ತಯಾರಿಕೆಯಂತಹ ಉದ್ದೇಶಗಳಿಗೆ ಬಳಸಬೇಕು ಎಂದು ಡಾ.ರಾಮದಾಸ್ ಟ್ವೀಟಿಸಿದ್ದಾರೆ.

ಚೆನ್ನೈ ಬಂದರಿನ ಮೂಲಗಳು ತಿಳಿಸಿರುವಂತೆ ಇಷ್ಟೊಂದು ಭಾರೀ ಪ್ರಮಾಣದ ಅಮೋನಿಯಂ ನೈಟ್ರೇಟ್‌ನ್ನು ಕಸ್ಟಮ್ಸ್ ಇಲಾಖೆಯು 2015ರಲ್ಲಿ ವಶಪಡಿಸಿಕೊಂಡಿತ್ತು ಮತ್ತು ಆಗಿನಿಂದಲೂ ಅದು ಗೋದಾಮಿನಲ್ಲಿ ಕೊಳೆಯುತ್ತಿದೆ.

ಚೆನ್ನೈ ಬಂದರಿನಿಂದ 14 ಕಿ.ಮೀ.ದೂರದ ಮನಲಿ ಎಂಬಲ್ಲಿ ಈ ರಾಸಾಯನಿಕವನ್ನು ಸುರಕ್ಷಿತವಾಗಿ ದಾಸ್ತಾನಿರಿಸಲಾಗಿದೆ. ತಲಾ ಸುಮಾರು 20 ಟನ್ ಅಮೋನಿಯಂ ನೈಟ್ರೇಟ್ ತುಂಬಿರುವ 36 ಕಂಟೇನರ್‌ಗಳಿದ್ದು,ಇವುಗಳನ್ನು ಭಾರತದ ಪಟಾಕಿ ತಯಾರಿಕೆ ಕೇಂದ್ರವಾಗಿರುವ ಶಿವಕಾಶಿಗೆ ರವಾನಿಸಲು ಉದ್ದೇಶಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅದಕ್ಕೆ ಮೊದಲೇ ಕಸ್ಟಮ್ಸ್ ಅಧಿಕಾರಿಗಳು ಸೊತ್ತನ್ನು ವಶಪಡಿಸಿಕೊಂಡಿದ್ದರು ಎಂದು ಗುರುತು ಬಹಿರಂಗಪಡಿಸಲು ಇಚ್ಛಿಸದ ಬಂದರು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News