ಮಳೆ ಹಾನಿಗೆ ತಕ್ಷಣ ಪರಿಹಾರ ವಿತರಿಸಿ: ಸಚಿವ ಬೊಮ್ಮಾಯಿ

Update: 2020-08-06 15:19 GMT

ಉಡುಪಿ, ಆ.6: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ತಕ್ಷಣವೇ ಪರಿಹಾರ ವಿತರಿಸುವಂತೆ ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗುರುವಾರ, ಬೆಂಗಳೂರಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಮಳೆ ಹಾನಿ ಹಾಗೂ ಕೋವಿಡ್ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗೆ ಮಾತನಾಡುವ ವೇಳೆ ಅವರು ಈ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪ್ರಾಥಮಿಕ ಹಂತದ ಪರಿಹಾರ ಬಿಡುಗಡೆಗೊಳಿಸಿ. ಮನೆ ಹಾನಿಯ ವಿವರಗಳನ್ನು ರಾಜೀವ ಗಾಂಧಿವಸತಿ ನಿಗಮದ ಪೋರ್ಟಲ್‌ನಲ್ಲಿ ಹಾನಿಯಾದ ದಿನವೇ ಅಪ್‌ಲೋಡ್ ಮಾಡುವಂತೆ ಸೂಚಿಸಿದ ಸಚಿವ ಬೊಮ್ಮಾಯಿ, ಕೃಷಿ ಬೆಳ ಹಾನಿ ಪರಿಶೀಲಿಸಲು ತಾಲೂಕುವಾರು ಕಂದಾಯ, ಕೃಷಿ ಮತ್ತು ಪಿಡಿಓ ಒಳಗೊಂಡ ತಂಡಗಳನ್ನು ರಚಿಸಿ. ಈ ತಂಡ ಹಾನಿಯ ಸಮೀಕ್ಷೆ ಯನ್ನು ಶೀಘ್ರದಲ್ಲಿ ನಡೆಸಿ ವರದಿ ಪಡೆದು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ. ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿದ್ದಲ್ಲಿ ಅಲ್ಲಿನ ಜನತೆಗೆ ಈ ತಿಂಗಳ ಪಡಿತರದ ಜೊತೆಗೆ ಮುಂದಿನ ತಿಂಗಳು ಪಡಿತರವನ್ನು ಮುಂಚಿತವಾಗಿ ವಿತರಿಸುವಂತೆ ಸೂಚಿಸಿದರು.

118 ಮನೆಗಳಿಗೆ ಹಾನಿ:   ಜಿಲ್ಲೆಯಲ್ಲಿ ಇದುವರೆಗೆ 116 ಮನೆಗಳಿಗೆ ಭಾಗಶ: ಹಾನಿ ಮತ್ತು ಎರಡು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅವುಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ. ವಿಪತ್ತು ಪರಿಹಾರ ನಿಧಿಯಲ್ಲಿ ಹಣದ ಕೊರತೆ ಇಲ್ಲ. ತಹಶೀಲ್ದಾರ್‌ಗಳಿಗೆ ಹಾನಿಯ ಪರಿಹಾರ ವಿತರಿಸುವ ಅಧಿಕಾರ ನೀಡಲಾಗಿದೆ.ಸಂಬಂದಪಟ್ಟ ತಹಶೀಲ್ದಾರ್‌ಗಳಿಗೆ ಹಣ ಬಿಡುಗಡೆ ಮಾಡಲಾ ಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಚಿವರಿಗೆ ವಿವರಿಸಿದರು.

ಪ್ರವಾಹದಿಂದ ಜನರನ್ನು ಸ್ಥಳಾಂತರಿಸುವ ಪರಿಸ್ಥಿತಿ ಜಿಲ್ಲೆಯಲ್ಲಿ ಸದ್ಯ ಇಲ್ಲ. ಪ್ರವಾಹ ಸಂಭ್ಯಾವಿತ 26 ಗ್ರಾಮಗಳನ್ನು ಗುರುತಿಸಲಾಗಿದ್ದು, ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ಅಧಿಕಾರಿಗಳಿಗೆ ಕೇಂದ್ರಸ್ಥಾನ ದಲ್ಲಿರಲು ಸೂಚನೆಗಳನ್ನು ನೀಡಲಾಗಿದೆ. ತಾನು ಈಗಾಗಲೇ ಮರವಂತೆ ಮತ್ತು ನಾವುಂದಕ್ಕೆ ಭೇಟಿ ನೀಡಿ ನೆರೆ ಕುರಿತು ಪರಿಶೀಲನೆ ನಡೆಸಿದ್ದೇನೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಈ ತಿಂಗಳ ಪಡಿತರ ಎತ್ತುವಳಿ ಆಗಿದ್ದು, ಕಳೆದ ತಿಂಗಳು ಶೇ.95 ರಷ್ಟು ಪಡಿತರ ವಿತರಣೆಯಾಗಿದೆ. 1000 ಟನ್ ರಸಗೊಬ್ಬರದ ಅವಶ್ಯಕತೆ ಇದ್ದು, ಎಂಸಿಎಫ್‌ನಿಂದ ನಾಳೆ ಸರಬರಾಜು ಆಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ರಸಗೊಬ್ಬರದ ಸಮಸ್ಯೆ ಇಲ್ಲ. ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಶೇ.88ರಷ್ಟು ಪೂರ್ಣಗೊಂಡಿದೆ ಎಂದು ಡಿಸಿ ಹೇಳಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿಧಿಗೆ ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದ ಸಚಿವರು, ಜಿಲ್ಲೆಯ ಪ್ರತಿದಿನದ ಹಾನಿಯ ವರದಿಯನ್ನು ತಮಗೆ ನೀಡುವಂತೆ ಹಾಗೂ ಜಿಲ್ಲೆಯ ನಾಗರೀಕರಿಗೆ ಮಳೆಯಿಂದ ಯಾವುದೇ ರೀತಿಯ ಸಮಸ್ಯೆಗಳಾದಲ್ಲಿ ತಕ್ಷಣವೇ ಸ್ಪಂದಿಸಿ ಅಗತ್ಯ ನೆರವು ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್-19 ಮಾಹಿತಿ:  ಜಿಲ್ಲೆಯಲ್ಲಿ ಕೋವಿಡ್-19 ಸ್ಥಿತಿಗತಿಗೆ ಸಂಬಂಧಿ ಸಿದ ಮಾಹಿತಿಗಳನ್ನು ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಕಳೆದ ವಾರದಿಂದ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 145 ಪ್ರಕರಣಗಳು ವರದಿಯಾಗುತ್ತಿದ್ದು, ಪ್ರಸ್ತುತ 2100 ಸಕ್ರಿಯ ಪ್ರಕರಣಗಳಿವೆ. 1000 ಮಂದಿ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ನಲ್ಲಿ ಮತ್ತು 1100 ಮಂದಿ ಹೋಂ ಐಸೋಲೇಶನ್‌ನಲ್ಲಿದ್ದಾರೆ. ಇದುವರೆಗೆ ಒಟ್ಟು 46 ಮರಣ ಸಂಭವಿಸಿದ್ದು, 15 ದಿನಗಳಿಂದ ಮರಣದ ಸಂಖ್ಯೆ ಅಧಿಕವಾಗಿದೆ ಎಂದರು.

ಕೋವಿಡ್-19 ಚಿಕಿತ್ಸೆಗೆ ಸಂಬಂಧಿಸಿದಂತೆ ಬೆಡ್‌ಗಳು, ವೆಂಟಿಲೇಟರ್ ಮತ್ತು ಹೈಫ್ಲೋ ಆಕ್ಸಿಜಿನ್ ಬೆಡ್‌ಗಳ ಕೊರತೆ ಇಲ್ಲ. ಪಾಸಿಟಿವ್ ಬಂದ ಕೊನೆಯ ಹಂತದಲ್ಲಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಮರಣ ಅಧಿಕ ವಾಗಿದ್ದು, ಇದನ್ನು ತಪ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸರ್ವೇಕ್ಷಣೆ ನಡೆಸಬೇಕಿದೆ. ಇದಕ್ಕಾಗಿ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಅನುಮತಿ ನೀಡುವಂೆ ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಸರಕಾರಿ ಕೋವಿಡ್ ಲ್ಯಾಬ್ ಕಾರ್ಯ, ಪರೀಕ್ಷಾ ಕಿಟ್‌ಗಳ ಸರಬರಾಜು ಕುರಿತು ಮಾಹಿತಿ ಪಡೆದ ಉಸ್ತುವಾರಿ ಸಚಿವರು, ತುರ್ತು ಸಂದರ್ಭಗಳಲ್ಲಿ ಮಾತ್ರ ಆಂಟಿಜಿನ್ ಕಿಟ್‌ಗಳ ಬಳಕೆ ಮಾಡುವಂತೆ ಮತ್ತು ರೋಗ ಲಕ್ಷಣವಿರುವ ವ್ಯಕ್ತಿಗಳನ್ನು ಆರ್‌ಟಿಪಿಸಿಆರ್ ಮೂಲಕ ಪರೀಕ್ಷೆ ನಡೆಸುವಂತೆ ಸೂಚಿಸಿದರು. ಆರೋಗ್ಯ ಇಲಾಖೆಯಲ್ಲಿ ಸರ್ವೆಕ್ಷಣಾ ಸಿಬ್ಬಂದಿ ನೇಮಕ ಕುರಿತಂತೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಬೊಮ್ಮಾಯಿ ಭರವಸೆ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News