​ದ.ಕ. : ಶಾಲೆಗಳಿಗೆ ಪಠ್ಯ ಪುಸ್ತಕಗಳ ವಿತರಣೆ ಪ್ರಕ್ರಿಯೆ ಆರಂಭ

Update: 2020-08-06 17:04 GMT

ಮಂಗಳೂರು, ಆ.6: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ 2020-21ನೆ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ-ತರಗತಿಗಳು ಪುನರಾರಂಭ ಗೊಳ್ಳದಿದ್ದರೂ ಕೂಡ ಅಧಿಕಾರಿ-ಶಿಕ್ಷಕವೃಂದ-ಸಿಬ್ಬಂದಿ ವರ್ಗದಿಂದ ಕರ್ತವ್ಯ ನಿರ್ವಹಿಸತೊಡಗಿದ್ದಾರೆ. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ದ.ಕ. ಜಿಲ್ಲೆಯ ಶಾಲೆಗಳಿಗೆ ಪುಸ್ತಕಗಳನ್ನು ವಿತರಿಸತೊಡಗಿದೆ.

ಈಗಾಗಲೆ 1ರಿಂದ 10ನೆ ತರಗತಿಯ ಪಠ್ಯಪುಸ್ತಕಗಳ ಪೈಕಿ ಶೇ.90ರಷ್ಟು ಪಠ್ಯಪುಸ್ತಕಗಳು ಜಿಲ್ಲೆಗೆ ತಲುಪಿದೆ. ಅವುಗಳನ್ನು ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ರವಾನಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಂದ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ತಲುಪಿಸುವ ಕಾರ್ಯ ಆರಂಭಗೊಂಡಿದೆ. ಇನ್ನೇನೇ ಸರಕಾರದ ಸೂಚನೆ ಬಂದೊಡನೆ ಸುರಕ್ಷಿತ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳಿಗೆ ವಿತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಂದಾಗಿದೆ.

ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಸರಕಾರದಿಂದ ಉಚಿತವಾಗಿ ನೀಡಲಾಗುತ್ತಿದೆ. ಅನುದಾನರಹಿತ ಶಾಲೆಗಳು ಪುಸ್ತಕಗಳನ್ನು ನಿಗದಿತ ದರ ಪಾವತಿಸಿ ಪಡೆಯಬೇಕಾಗುತ್ತದೆ. ದ.ಕ.ಜಿಲ್ಲೆಯಲ್ಲಿ 15,54,325 ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಿಸಲು ಮತ್ತು 8,71,069 ಪಠ್ಯಪುಸ್ತಕಗಳನ್ನು ಮಾರಾಟ ಮಾಡಲು ಶಿಕ್ಷಣ ಇಲಾಖೆಗೆ ಬೇಡಿಕೆ ಬಂದಿತ್ತು. ಅದರಂತೆ ಉಚಿತ ವಿಭಾಗದಲ್ಲಿ 13,78,119 ಹಾಗೂ ಮಾರಾಟ ವಿಭಾಗದಲ್ಲಿ 8,70,919 ಪುಸ್ತಕಗಳು ಜಿಲ್ಲೆಗೆ ತಲುಪಿವೆ.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಉಚಿತ ವಿಭಾಗದ 3,58,562 ಪಠ್ಯಪುಸ್ತಕಗಳಲ್ಲಿ 3,14,763 ಹಾಗೂ ಮಾರಾಟ ವಿಭಾಗದ 1,51,963 ಪಠ್ಯಪುಸ್ತಕಗಳಲ್ಲಿ 1,51,853 ಪಠ್ಯಪುಸ್ತಕಗಳು ತಲುಪಿವೆ. ಬೆಳ್ತಂಗಡಿಗೆ ಉಚಿತದ 2,95,366ರಲ್ಲಿ 2,51,383 ಹಾಗೂ ಮಾರಾಟದ 79,820ರಲ್ಲಿ 78,898, ಮಂಗಳೂರು ಉತ್ತರ ವಲಯದ ಉಚಿತದ 1,98,092ರಲ್ಲಿ 1,82,561 ಹಾಗೂ ಮಾರಾಟದ 2,07,228ರಲ್ಲಿ 2,06,978, ಮಂಗಳೂರು ದಕ್ಷಿಣದ ಉಚಿತ 2,15,484ರಲ್ಲಿ 1,96,293 ಹಾಗೂ ಮಾರಾಟದ 2,08,940ರಲ್ಲಿ 2,11,850, ಮೂಡುಬಿದಿರೆಯ ಉಚಿತದ 81,761ರಲ್ಲಿ 73,246 ಹಾಗೂ ಮಾರಾಟದ 55,215ರಲ್ಲಿ 54,680, ಪುತ್ತೂರಿನ ಉಚಿತದ 2,72,165ರಲ್ಲಿ 2,42,730 ಹಾಗೂ ಮಾರಾಟದ 1,26,598ರಲ್ಲಿ 1,25,431 ಹಾಗೂ ಸುಳ್ಯದ ಉಚಿತದ 1,32,895ರಲ್ಲಿ 1,17,143 ಹಾಗೂ ಮಾರಾಟದ 41,305ರಲ್ಲಿ 41,229 ಪಠ್ಯಪುಸ್ತಕಗಳು ರವಾನೆಯಾಗಿದೆ. ಅಲ್ಲಿಂದ ವಿವಿಧ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ತಲುಪಿಸುವ ಕಾರ್ಯ ನಡೆಯು ತ್ತಿದೆ. ಮಾರಾಟ ವಿಭಾಗದ ಪುಸ್ತಕಗಳು ಅನುದಾನ ರಹಿತ ಶಾಲೆಗಳಿಗೆ ರವಾನೆಯಾಗುತ್ತದೆ.

ಕೊರೋನದಿಂದ ಶಾಲಾ ಕಾಲೇಜುಗಳ ಪ್ರಾರಂಭವನ್ನು ಆ.31ರವರೆಗೆ ಮುಂದೂಡಲಾಗಿದೆ. ಈ ಮಧ್ಯೆ ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ. 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಂದನವಾಹಿನಿ ಮೂಲಕ ಪಾಠಗಳನ್ನು ನಡೆಸಲಾಗುತ್ತಿದೆ. ಅಲ್ಲದೆ ಸರಕಾರಿ ಶಾಲೆಗಳ 1ರಿಂದ 7ನೇ ತರಗತಿ ಮಕ್ಕಳ ಸಂಪರ್ಕ ಸಾಧಿಸಿ ಅವರನ್ನು ಕಲಿಕಾ ಪ್ರಕಿಯೆಯಲ್ಲಿ ನಿರಂತರವಾಗಿಸುವ ಕಾರ್ಯ ಜಿಲ್ಲೆಯ ಹಲವು ಕಡೆ ಶಿಕ್ಷಕರಿಂದ ನಡೆಯುತ್ತಿದೆ.

ಆ.1ರಿಂದ ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ಕರ್ತವ್ಯ ಆರಂಭಿಸಿದ್ದಾರೆ. ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗಳ ಕುರಿತು ಕಾರ್ಯಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ‘ವಿದ್ಯಾಗಮ’ ಕಾರ್ಯಕ್ರಮ ರೂಪಿಸಿದೆ. ಶಾಲೆ ಪ್ರಾರಂಭವಾಗುವರೆಗೆ ವಿದ್ಯಾರ್ಥಿಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯ ವಾಗಿಸುವುದು ‘ವಿದ್ಯಾಗಮ’ದ ಉದ್ದೇಶವಾಗಿದೆ.
ಮಲ್ಲೇಸ್ವಾಮಿ,
ವಿದ್ಯಾಂಗ ಉಪನಿರ್ದೇಶಕರು
ದ.ಕ.ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News