ಭಟ್ಕಳ : ಕೋವಿಡ್-19 ‘ಮರಳಿ ಸೃಷ್ಟಿಕರ್ತನ ಕಡೆಗೆ ಅಭಿಯಾನ’ಕ್ಕೆ ಚಾಲನೆ

Update: 2020-08-06 17:40 GMT

ಭಟ್ಕಳ: ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮಾನವನನ್ನು ಎಚ್ಚರಿಸುತ್ತಿದ್ದು, ಮನುಷ್ಯರನ್ನು ಸರಿದಾರಿಗೆ ತರಲು ದೈವಿಕ ಎಚ್ಚರಿಕೆಗಳಾಗಿವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ಹೇಳಿದರು.

ಅವರು ಗುರುವಾರ ಸುಲ್ತಾನ್ ಸ್ಟ್ರೀಟ್ ನಲ್ಲಿರುವ ದಾವತ್ ಸೆಂಟರ್ ಕೋವಿಡ್-19 ಮರಳಿ ಸೃಷ್ಟಿಕರ್ತನ ಕಡೆಗೆ ರಾಜ್ಯ ವ್ಯಾಪಿ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ  ಮಾತನಾಡಿದರು.

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕವು ಅ.5ರಿಂದ 20ರ ವರೆಗೆ ಕೋವಿಡ್-19 ‘ಮರಳಿ ಸೃಷ್ಟಿಕರ್ತನ ಕಡೆಗೆ’ ರಾಜ್ಯವ್ಯಾಪಿ ಆಭಿಯಾನ ವನ್ನು ಆಯೋಜಿಸಿದ್ದು ಭಟ್ಕಳದಲ್ಲಿಯೂ ಈ ಅಭಿಯಾನವನ್ನು ಯಶಸ್ವಿಗೊಳಿಸಲಾಗುವುದು ಎಂದರು.

ಅಭಿಯಾನದ ಮೂಲಕ ಕೊರೋನ ಸೋಂಕು ಕುರಿತ ಜಾಗೃತಿಯನ್ನು ಜನರನ್ನು ಮೂಡಿಸುವುದರದ ಜತೆಗೆ ನಾವು ನಮ್ಮ ಸೃಷ್ಟಿಕರ್ತನ ಕಡೆಗೆ ಮರಳಬೇಕಿದೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ನಮ್ಮ ಪ್ರಭುವನ್ನು ಅರಿತು ಜೀವಿಸುವುದಾಗಿದೆ ಎಂದ ಅವರು, ಇದಕ್ಕಾಗಿ ಯೂ ಟ್ಯೂಬ್, ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ ಮೂಲಕ ಸಂದೇಶಗಳನ್ನು ಸಾರಲಾಗುತ್ತದೆ. ಅಲ್ಲದೆ ಮಸೀದಿಗಳಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಲಾಗುವುದು, ಸಾಂಕ್ರಮಿಕ ರೋಗ ಪೀಡಿತರಲ್ಲಿ ಯಾವುದೇ ಭೇದ-ಭಾವವನ್ನು ತೋರದೆ ಎಲ್ಲರಿಗೂ ಸಹಾಯವನ್ನು ಒದಗಿಸುವುದು, ಕೋವಿಡ್ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ, ಮಾಸ್ಕ್ ಪೂರೈಕೆ, ವೈದ್ಯಕೀಯ ಸವಲತ್ತುಗಳು ಕುರಿತು ಮಾರ್ಗದರ್ಶನ, ಡಾಕ್ಟರ್ಸ್ ಫಾರ್ ಹ್ಯುಮಾನಿಟಿ ವತಿಯಿಂದ ವೈದ್ಯರ ಸೇವೆ, ಮಸೀದಿ ಮೊಹಲ್ಲಗಳ ಮಟ್ಟದಲ್ಲಿ ಜನಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶಗಳಾಗಿವೆ ಎಂದರು.

ಜ.ಇ.ಹಿಂದ್ ಭಟ್ಕಳ ಘಟಕದ ಉಪಾಧ್ಯಕ್ಷ ಮುಜಾಹಿದ್ ಮುಸ್ತಫಾ ಮಾತನಾಡಿ, ಜನರಲ್ಲಿ ಧೈರ್ಯ ಸ್ಥೈರ್ಯ ದೇವನ ಮೇಲಿನ ವಿಶ್ವಾಸ, ಭರವಸೆ, ದೇವಸ್ಮರಣೆಯೊಂದಿಗೆ ಬದುಕುವಂತೆ ಜನರನ್ನು ಜಾಗೃತಿಗೊಳಿಸುವುದು, ಜನ ಸಾಮಾನ್ಯರನ್ನು ದೇವನ ದಾಸ್ಯರಾಧನೆಯ ಕಡೆಗೆ ಕರೆ ನೀಡುವುದು ಈ ಅಭಿಯಾನದಲ್ಲಿ ಸೇರಿದೆ ಎಂದರು.

ಅಭಿಯಾನದ ಸಂಚಾಲಕ ಎಂ.ಆರ್. ಮಾನ್ವಿ ಮಾತನಾಡಿ, ಕೊರೋನಾ ಇನ್ನೂ ಮನುಷ್ಯನ ಕೈಗೆಟುಕುತ್ತಿಲ್ಲ. ಇದುವರೆಗೂ ಯಾವುದೇ ಲಸಿಕೆಗಳಾಗಲಿ, ಔಷಧಗಳಾಗಲಿ ಕಂಡುಹಿಡಿಯಲು ಮನುಷ್ಯನಿಗೆ ಸಾಧ್ಯವಾಗಿಲ್ಲ. ಪ್ರಯತ್ನಗಳು ನಡೆಯುತ್ತಿದ್ದರೂ ಇದುವರೆಗೂ ಅದರಲ್ಲಿ ಯಶಸ್ವಿಯಾಗಿಲ್ಲ. ಆದ್ದರಿಂದ ನಾವು ನಮ್ಮ ಬದುಕನ್ನು ಸರಿಯಾಗಿ ನಡೆಸುವುದರ ಮೂಲಕ ನಮ್ಮ ಸೃಷ್ಟಿಕರ್ತನ ಕಡೆಗೆ ಮರಳುವುದೊಂದೆ ಮನುಷ್ಯನಿಗಿರುವ ಏಕೈಕ ಮಾರ್ಗವಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News