ಮಂಗಳೂರು: ಟಿಪ್ಪು ಸುಲ್ತಾನ್ ಅಭಿಮಾನಿಗಳ ವೇದಿಕೆಯಿಂದ ಮನೆ ಹಸ್ತಾಂತರ

Update: 2020-08-06 17:41 GMT

ಮಂಗಳೂರು, ಆ.6: ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ವತಿಯಿಂದ ಮುನ್ನೂರು ಗ್ರಾಮದ ಸುಭಾಷ್ ನಗರದಲ್ಲಿ ನವೀಕರಿಸಲ್ಪಟ್ಟ ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸುವ ಕಾರ್ಯಕ್ರಮ ಗುರುವಾರ ನಡೆಯಿತು.

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ಯುಟಿ ಖಾದರ್ ಹಿರಿಯರಿಗೆ ವಿದ್ಯಾಭ್ಯಾಸ ಕಡಿಮೆ ಇರಬಹುದು. ಆದರೆ ಅವರ ಅನುಭವದ ಮುಂದೆ ಎಲ್ಲಾ ರೀತಿಯ ಉನ್ನತ ಶಿಕ್ಷಣವೂ ವ್ಯರ್ಥ. ಈ ಹಿನ್ನೆಲೆಯಲ್ಲಿ ಸಂಘಟನೆಗಳು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಯಶಸ್ಸು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೆ ಸಮಾಜದಲ್ಲಿ ಸಂಘಟನೆಗಳು ಸಾಕಷ್ಟು ಇವೆ. ಆದರೆ ಈ ಸಂಘಟನೆಗಳ ಉದ್ದೇಶ ಎಲ್ಲರಿಗೂ ಉಪಕಾರ ಆಗುವಂತಿರಬೇಕು. ಸಮಾಜದಲ್ಲಿ ಪರಸ್ಪರ ಪ್ರೀತಿ, ಬಾಂಧವ್ಯ ಮೂಡಿಸುವ ಉದ್ದೇಶ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.

ಅತಿಥಿಗಳಾಗಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಪತ್ರಕರ್ತ ವಿದ್ಯಾಧರ್ ಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಹಂಝ ಮಲಾರ್, ಅನ್ಸಾರ್ ಇನೋಳಿ ಹಾಗೂ ಕಾನೂನು ವಿದ್ಯಾರ್ಥಿ ಅಫ್ರೀಝ್ ಸಜಿಪ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ. ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಈ ಮನೆ ನಿರ್ಮಾಣ ಕಾರ್ಯವು ಅರ್ಧದಲ್ಲೇ ಬಾಕಿಯಾಗಿತ್ತು. ಸಂಘಟನೆ ಮತ್ತು ದಾನಿಗಳ ಸಹಕಾರದಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ಪೂರ್ತಿಗೊಳಿಸಲಾಗಿದೆ. ಇನ್ನೊಂದು ಮನೆ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಮುಂದೆಯೂ ಇಂತಹ ಹಲವು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಆಲ್ವಿನ್ ಡಿಸೋಜ, ಝಕರಿಯಾ ಮಲಾರ್ ಉಪಸ್ಥಿತರಿದ್ದರು. ಮಹಾವೇದಿಕೆಯ ಕಾನೂನು ಸಲಹೆಗಾರ ಆರ್.ಕೆ. ಮದನಿ ಅಮ್ಮೆಂಬಳ ಸ್ವಾಗತಿಸಿದರು. ಮುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News