​ಕೇವಲ 21 ದಿನದಲ್ಲಿ ದೇಶದಲ್ಲಿ 10 ಲಕ್ಷ ಕೋವಿಡ್ ಪ್ರಕರಣಗಳು ಸೇರ್ಪಡೆ

Update: 2020-08-07 03:49 GMT

ಹೊಸದಿಲ್ಲಿ : ಅಮೆರಿಕ ಮತ್ತು ಬ್ರೆಝಿಲ್ ದೇಶಗಳನ್ನು ಹೊರತುಪಡಿಸಿದರೆ ಭಾರತ ಇಡೀ ವಿಶ್ವದಲ್ಲೇ 20 ಲಕ್ಷಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ದಾಖಲಾದ ದೇಶ ಎನಿಸಿಕೊಂಡಿದೆ.

ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10 ಲಕ್ಷ ತಲುಪಿ ಕೇವಲ ಮೂರು ವಾರಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ. ಹೊಸ ಪ್ರಕರಣಗಳ ಪೈಕಿ ಶೇಕಡ 42ರಷ್ಟು ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಿಂದ ವರದಿಯಾಗಿವೆ.

ಗುರುವಾರ ದೇಶದಲ್ಲಿ ಹೊಸದಾಗಿ 62,088 ಪ್ರಕರಣಗಳು ಸೇರ್ಪಡೆಯಾಗಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆ 20, 22,730ಕ್ಕೇರಿದೆ. ಸೋಂಕು ದ್ವಿಗುಣಗೊಳ್ಳುತ್ತಿರುವ ದಿನಗಳ ಸಂಖ್ಯೆ 22.7ರಷ್ಟಾಗಿದೆ. ಇದು ಅಮೆರಿಕ (60.2 ದಿನಗಳು) ಮತ್ತು ಬ್ರೆಜಿಲ್ (35.7 ದಿನ)ಗೆ ಹೋಲಿಸಿದರೆ ಅಧಿಕ. ಇದೇ ಪ್ರವೃತ್ತಿ ಮುಂದುವರಿದರೆ ಅಥವಾ ಲಸಿಕೆ ಅಭಿವೃದ್ಧಿಪಡಿಸದಿದ್ದರೆ ಭಾರತ ಈ ಎರಡು ದೇಶಗಳನ್ನು ಹಿಂದಿಕ್ಕುವ ಸಾಧ್ಯತೆ ಇದೆ.

ಆಂಧ್ರಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳು ಹೊಸ ಹಾಟ್‌ಸ್ಪಾಟ್‌ಗಳಾಗಿ ಬೆಳೆಯುತ್ತಿದ್ದು, ಈಗ ಬೆಳೆಯುತ್ತಿರುವ ಪ್ರಮಾಣದಲ್ಲೇ ಪ್ರಕರಣಗಳು ಹೆಚ್ಚಿದಲ್ಲಿ, ಕೇವಲ ಎರಡು ವಾರಗಳಲ್ಲಿ ಮತ್ತೆ 10 ಲಕ್ಷ ಪ್ರಕರಣ ಸೇರ್ಪಡೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಅಮೆರಿಕದಲ್ಲಿ ಒಟ್ಟು 49,93,508 ಹಾಗೂ ಬ್ರೆಝಿಲ್‌ನಲ್ಲಿ 28,73,304 ಪ್ರಕರಣಗಳು ಇದುವರೆಗೆ ದಾಖಲಾಗಿವೆ.

ಗುರುವಾರ ದೇಶದಲ್ಲಿ 898 ಮಂದಿ ಸೋಂಕಿಗೆ ಬಲಿಯಾಗಿದ್ದು, ಐದು ತಿಂಗಳಲ್ಲಿ ಒಟ್ಟು ಮೃತರ ಸಂಖ್ಯೆ 41,633ಕ್ಕೇರಿದೆ. ಆದರೆ ದೇಶದಲ್ಲಿ ಸೋಂಕಿತರ ಸಾವಿನ ಪ್ರಮಾಣ 2.06% ಇದ್ದು, ಇದು ಜಾಗತಿಕ ಸರಾಸರಿ (3.75%)ಗಿಂತ ಕಡಿಮೆ. ಜತೆಗೆ ಅಮೆರಿಕ (5.72%) ಹಾಗೂ ಬ್ರೆಝಿಲ್ (3.81%)ಗಿಂತಲೂ ಕಡಿಮೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News