ಹೊಸ ರಾಜ್ಯ, ಹೊಸ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಹಾಟ್‌ಸ್ಪಾಟ್

Update: 2020-08-07 04:43 GMT

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ಈ ಮಾರಕ ಸೊಂಕಿನ ಹಾಟ್‌ಸ್ಪಾಟ್‌ಗಳು ಪ್ರಮುಖ ನಗರ ಹಾಗೂ ಪಟ್ಟಣಗಳಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ ಹಾಗೂ ಹೊಸ ರಾಜ್ಯಗಳಿಗೆ ಸ್ಥಳಾಂತರವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚಿನ ವಾರಗಳಲ್ಲಿ ಸೊಲ್ಲಾಪುರ, ಥಾಣೆ, ನಾಸಿಕ್, ಪಾಲ್ಗರ್, ಸೂರತ್, ಜಲಗಾಂವ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಕಂಟೈನ್ಮೆಂಟ್ ವಲಯಗಳಾಗಿ ಪರಿವರ್ತನೆಯಾಗುತ್ತಿದ್ದು, ವಾರಕ್ಕೆ ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ.

ಇನ್ನೊಂದೆಡೆ ಪ್ರತಿ 10 ಲಕ್ಷ ಜನಸಂಖ್ಯೆಯ ಪೈಕಿ ಸೋಂಕಿತರ ಪ್ರಮಾಣ ಕೂಡಾ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಲಕ್ಷದ್ವೀಪ, ಗೋವಾ, ಆಂಧ್ರಪ್ರದೇಶ ಹಾಗೂ ಪುದುಚೇರಿಯಲ್ಲಿ ಹೆಚ್ಚುತ್ತಿದೆ. ಪ್ರತಿ 10 ಲಕ್ಷ ಮಂದಿಗೆ ಇಲ್ಲಿ 190ರಿಂದ 249 ಮಂದಿ ಸೋಂಕಿತರಿದ್ದಾರೆ. ಜುಲೈ 30ರ ವರೆಗೆ ಪುಣೆ, ಬೆಂಗಳೂರು, ಥಾಣೆ, ಮುಂಬೈ, ಚೆನ್ನೈ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳು ಅತ್ಯಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಅಗ್ರ 20 ಜಿಲ್ಲೆಗಳಲ್ಲಿ ಸೇರಿವೆ.

ಸಕ್ರಿಯ ಪ್ರಕರಣಗಳು ಇಳಿಮುಖವಾಗುತ್ತಿದ್ದು, ತೀವ್ರ ಪರೀಕ್ಷೆ ಮತ್ತು ಕ್ಷಿಪ್ರ ಗುಣಮುಖರಾಗುತ್ತಿರುವ ಕಾರಣದಿಂದ ಇದು ಸಾಧ್ಯವಾಗುತ್ತಿದೆ. ಇದು ಕ್ರಮೇಣ ಹಿಂಜರಿತಕ್ಕೆ ಕಾರಣವಾಗಲಿದೆ. ಆದರೆ ವಿವಿಧ ಹಂತಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಾಂಕ್ರಾಮಿಕಕ್ಕೆ ಭಿನ್ನ, ಆಯಾ ಕ್ಷೇತ್ರಕ್ಕೆ ಸೀಮಿತವಾಗಿ ಸ್ಪಂದಿಸುವ ಯೋಜನೆ ಕಾರ್ಯಗತಗೊಳಿಸುವ ಅಗತ್ಯವಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕ್ಷಿಪ್ರ ಪರೀಕ್ಷೆ ಮತ್ತು ಸಂಪರ್ಕ ಪತ್ತೆ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಬಿಹಾರ, ಒಡಿಶಾ, ಪೂರ್ವ ಉತ್ತರ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅಧಿಕ ಪ್ರಕರಣಗಳು ದಾಖಲಾಗುವ ಅಪಾಯ ಇದೆ ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News