ಕೇರಳದ ಮುನ್ನಾರ್ ಪ್ರದೇಶದಲ್ಲಿ ಭೂ ಕುಸಿತ; ಸಾವಿನ ಸಂಖ್ಯೆ 15ಕ್ಕೇರಿಕೆ

Update: 2020-08-07 18:58 GMT
Photo: Twitter (@DDNewsMalayalam)

ತಿರುವನಂತಪುರ, ಆ. 7: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೂಕುಸಿತದಿಂದ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ.

ಭೂಕುಸಿತದಿಂದ 15 ಮಂದಿ ಮೃತಪಟ್ಟಿದ್ದಾರೆ. ಮಣ್ಣಿನಡಿ ಸಿಲುಕಿದ 15 ಮಂದಿಯನ್ನು ರಕ್ಷಿಸಲಾಗಿದೆ. ಅವರು ಮುನಾರ್ ಟಾಟಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರಕಾರ ಭರಿಸಲಿದೆ ಎಂದು ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.

ಇಡುಕ್ಕಿ ಜಿಲ್ಲೆಯ ರಾಜಮಲೆ ಪ್ರದೇಶದಲ್ಲಿ ಈ ಭೂಕುಸಿತ ಸಂಭವಿಸಿದೆ. ಇದು ಪ್ರವಾಸಿ ಪಟ್ಟಣ ಮುನ್ನಾರ್‌ನಿಂದ ಸುಮಾರು 25 ಕಿ.ಮೀ.ದೂರದಲ್ಲಿದೆ. ಈ ಪ್ರದೇಶದಲ್ಲಿ ಸುಮಾರು 80 ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಎಷ್ಟು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂಬುದು ಇದುವರೆಗೆ ನಿಖರವಾಗಿ ತಿಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರದೇಶವನ್ನು ಸಂಪರ್ಕಿಸುವ ಸೇತುವೆ ನಿನ್ನೆಯ ಭಾರೀ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಈ ಸ್ಥಳವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ದುರ್ಗಮ ಪ್ರದೇಶವಾದುದರಿಂದ ರಕ್ಷಣಾ ಕಾರ್ಯಕರ್ತರ ಕಾರ್ಯಾಚರಣೆ ನಿಧಾನವಾಗುತ್ತಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ತಾಲೂಕು ಅಧಿಕಾರಿಗಳು ತಿಳಿಸಿದ್ದಾರೆ.

50 ಸದಸ್ಯರ ಕ್ಷಿಪ್ರ ಕಾರ್ಯ ಪಡೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಎನ್‌ಡಿಆರ್‌ಎಫ್ ತಂಡ ಕೂಡ ಘಟನಾ ಸ್ಥಳಕ್ಕೆ ತಲುಪಿದೆ ಎಂದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

 ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನಂತಹ ಪ್ರದೇಶಗಳು ಜಲಾವೃತವಾಗಿವೆ. ಎರ್ನಾಕುಳಂ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಪೆರಿಯಾರ್ ನದಿ ಉಕ್ಕಿ ಹರಿದು ಆಲುವಾದ ಶಿವ ದೇವಾಲಯ ಜಲಾವೃತವಾಗಿದೆ. ವಯನಾಡ್ ಜಿಲ್ಲೆಯ ಕುರಿಚಿಯಾರ್‌ಮಲ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಭೂಕುಸಿತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಪನಮಾರಾಮ್ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ.

ಶನಿವಾರ (ಆಗಸ್ಟ್ 8) ಇಡುಕ್ಕಿ, ತ್ರಿಶೂರ್, ವಯನಾಡ್ ಹಾಗೂ ಪಾಲಕ್ಕಾಡ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹಾಗೂ ತಿರುವನಂತಪುರ ಹೊರತುಪಡಿಸಿ ಇತರ ಎಲ್ಲ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರವಿವಾರ (ಆಗಸ್ಟ್ 9) ಇಡುಕ್ಕಿ, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

''ಜೀವ ಹಾನಿ ಸಂಭವಿಸಿರುವುದು ನನಗೆ ನೋವುಂಟು ಮಾಡಿದೆ'' ಎಂದು ಶುಕ್ರವಾರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ಪರಿಹಾರ ಧನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News