ಭೋಜ್‌ಪುರಿ ನಟಿ ಅನುಪಮಾ ಪಾಠಕ್ ಆತ್ಮಹತ್ಯೆ

Update: 2020-08-07 18:50 GMT

ಮುಂಬೈ, ಆ. 7: ಭೋಜ್ ಪುರಿ ಚಿತ್ರ ನಟಿ ಅನುಪಮಾ ಪಾಠಕ್ ಮುಂಬೈಯ ಅವರ ನಿವಾಸದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಮೆಟ್ರೋಪಾಲಿಟಿನ್ ವಲಯದ ಮಿರಾ ರೋಡ್ ಪ್ರದೇಶದಲ್ಲಿರುವ ಬಾಡಿಗೆ ಫ್ಲಾಟ್‌ನಲ್ಲಿ ರವಿವಾರ ಅನುಪಮಾ ಪಾಠಕ್ (40) ಅವರ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಹಾರ ಮೂಲದವರಾದ ಅನುಪಮಾ ಪಾಠಕ್ ಅವರು ಭೋಜ್‌ಪುರಿಯ ಹಲವು ಸಿನೆಮಾ ಹಾಗೂ ಟಿ.ವಿ. ಶೋಗಳಲ್ಲಿ ನಟಿಸಿದ್ದಾರೆ.

ಮೃತಪಡುವುದಕ್ಕಿಂತ ಒಂದು ದಿನ ಹಿಂದೆ ಫೇಸ್‌ಬುಕ್‌ನಲ್ಲಿ ಅವರು ವೀಡಿಯೊ ಹಂಚಿಕೊಂಡಿದ್ದಾರೆ ಹಾಗೂ ನಾನು ವಂಚನೆಗೊಳಗಾಗಿದ್ದೇನೆ, ಯಾರೊಬ್ಬರನ್ನೂ ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಸಹಾಯ ಮಾಡುವ ಸ್ನೇಹಿತರು ಇಲ್ಲದೇ ಇರುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಪತಿ ಮನೆಯಲ್ಲಿ ಇಲ್ಲದೇ ಇರುವ ಸಂದರ್ಭ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಸುಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News