ಪ್ರವಾಹ ಪರಿಹಾರಕ್ಕಾಗಿ ಉಡುಪಿ ಸಹಿತ 11 ಜಿಲ್ಲೆಗಳಿಗೆ ತಲಾ 5 ಕೋಟಿ ರೂ. ಬಿಡುಗಡೆ : ಸಚಿವ ಅಶೋಕ್

Update: 2020-08-07 10:50 GMT

‌ಉಡುಪಿ, ಆ.7: ಪ್ರಾಕೃತಿಕ ವಿಕೋಪ ಪರಿಹಾರ ಕಾಮಗಾರಿಗಳಿಗಾಗಿ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಹಾವೇರಿ, ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಗಳಿಗೆ ತಲಾ ಐದು ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಮಳೆ ಹಾನಿ ಪರಿಹಾರ ಕಾರ್ಯ ಸಂಬಂಧ ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಪರಿಶೀಲನಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.

ಪ್ರಾಕೃತಿಕ ವಿಕೋಪದಿಂದ ಯಾವುದೇ ಸಾವು ನೋವುಗಳು ಆಗದಂತೆ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು ಮತ್ತು ನೆರೆ, ಕಡಲ್ಕೊರೆತ, ಭೂಕುಸಿತ ದಂತಹ ಸ್ಥಳಗಳಲ್ಲಿ ವಾಸ ಮಾಡುವವರನ್ನು ಗುರುತಿಸಿ, ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿನ ಸಂತ್ರಸ್ತರಿಗೆ ಸರಿಯಾದ ಊಟದ, ಕುಡಿಯುವ ನೀರು, ವೈದ್ಯಕೀಯ ವ್ಯವಸ್ಥೆ ಒದಗಿಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಉಡುಪಿ ಜಿಲ್ಲಾಧಿಕಾರಿ ಖಾತೆಯಲ್ಲಿ ಕೋವಿಡ್, ಮನೆ ನಿರ್ಮಾಣ ಹೊರತು ಪಡಿಸಿ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ 3.5 ಕೋಟಿ ರೂ. ಹಣ ಇದೆ. ಮತ್ತೆ ಹೆಚ್ಚುವರಿಯಾಗಿ ಐದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮಳೆಯಿಂದ ಪೂರ್ತಿ ಮನೆ ಬಿದ್ದರೆ 5ಲಕ್ಷ ರೂ., ಭಾಗಃಶ ಹಾನಿಯಾದರೆ 3ಲಕ್ಷ ರೂ. ಹಾಗೂ ನೀರು ನುಗ್ಗಿದರೆ 10ಸಾವಿರ ರೂ. ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಕಳೆದ ಬಾರಿ ಪ್ರವಾಹದ ಸಂದರ್ಭದಲ್ಲಿ ಹಾನಿಗೊಳಗಾದ ಎಲ್ಲ ಮನೆಗಳಿಗೆ ವಾರದೊಳಗೆ ಎರಡನೆ, ಮೂರನೆ ಮತ್ತು ನಾಲ್ಕನೆ ಕಂತಿನ ಹಣವನ್ನು ನೀಡಲು 340ಕೋಟಿ ರೂ. ಅನುದಾನವನ್ನು ವಸತಿ ಇಲಾಖೆಗೆ ಬಿಡುಗಡೆ ಮಾಡ ಲಾಗುವುದು. ಈ ಹಣವನ್ನು ಪಡೆದುಕೊಳ್ಳುವಂತೆ ಪ್ರತಿ ಫಲಾನುಭವಿಗಳಿಗೆ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.

ಚಿಕಿತ್ಸಾಲಯ, ಗ್ರಂಥಾಲಯ, ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಕ್ಯಾಂಟಿನ್, ಅಡುಗೆ ಕೋಣೆಗಳನ್ನು ಒಳಗೊಂಡ ಅತ್ಯಾಧುನಿಕ ಹಾಗೂ ಸುಸಜ್ಜಿತವಾದ ವಿಪತ್ತು ನಿರ್ವಹಣಾ ಪರಿಹಾರ ಕೇಂದ್ರವನ್ನು ಕಾರ್ಕಳದಲ್ಲಿ ಸ್ಥಾಪಿಸಲು 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಮುಂದಿನ 15 ದಿನಗಳೊಳಗೆ ಅಂದಾಜು ಸಿದ್ಧಪಡಿಸಿ, ಕಳುಹಿಸಲು ಸೂಚಿಸ ಲಾಗಿದೆ. ಅದಕ್ಕೆ ತಕ್ಷಣವೇ ಅನುಮೋದನೆ ನೀಡಲಾಗುವುದು. ಮಳೆಗಾಲದ ನಾಲ್ಕು ತಿಂಗಳ ಕಾಲ ಕಡಲ್ಕೊರೆತ, ಪ್ರವಾಹ ಸಂತ್ರಸ್ತರಿಗೆ ಉಳಿದುಕೊಳ್ಳಲು ಈ ಭವನವನ್ನು ಮೀಸಲಿರಿಸಿ, ಉಳಿದ ಸಮಯ ದಲ್ಲಿ ಸರಕಾರಿ ಕಾರ್ಯಕ್ರಮ ಗಳಿಗೆ ಬಳಸಿಕೊಳ್ಳಲು ಅುಮತಿ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News