ಕೊಂಕಣ ರೈಲ್ವೆ: ಎಂಟು ರೈಲುಗಳ ಸಂಚಾರ ಮಾರ್ಗ ಬದಲು

Update: 2020-08-07 12:26 GMT

ಉಡುಪಿ, ಆ.7: ಕಳೆದ ಐದಾರು ದಿನಗಳಿಂದ ಗೋವಾ ಆಸುಪಾಸು ಸುರಿಯುತ್ತಿರುವ ಭಾರೀ ಮಳೆಯ ಕಾರಣ ಕೊಂಕಣ ರೈಲ್ವೆ ವ್ಯಾಪ್ತಿಯ ಕಾರವಾರ ವಲಯದ ಪೆರ್ನೆಂ ಬಳಿಯ ಸುರಂಗದ ಒಳಭಾಗದ ತಡೆಗೋಡೆಯ ಒಂದು ಭಾಗ ಕುಸಿದಿದ್ದು, ಇದರಿಂದ ಕರ್ನಾಟಕ ಕರಾವಳಿ ಮೂಲಕ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸಬೇಕಿದ್ದ ಎಂಟು ರೈಲುಗಳ ಮಾರ್ಗವನ್ನು ಬದಲಿಸಿ ಲೋಂಡಾ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಬೆಳಗಿನ ಜಾವ 2:50ರ ಸುಮಾರಿಗೆ ಮದುರೆ ಮತ್ತು ಪೆರ್ನೆಂ ಮಧ್ಯೆ ಈ ಘಟನೆ ನಡೆದಿದೆ. ಸುಮಾರು ಐದು ಮೀ.ನಷ್ಟು ಎತ್ತರದ ಗೋಡೆ ಕುಸಿದಿದೆ. ಯಾವುದೇ ಜೀವಹಾನಿ ಅಥವಾ ಅಪಾಯ ಸಂಭವಿಸಿಲ್ಲ. ಗೋಡೆ ಕುಸಿದು ಮಣ್ಣು ಹಳಿಗಳ ಮೇಲೆ ಜರಿದಿರುವುದರಿಂದ ಮಣ್ಣನ್ನು ತೆರವು ಗೊಳಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ ಮುಂದಿನ ಸೂಚನೆ ನೀಡುವವರೆಗೆ ಕೊಂಕಣ ರೈಲು ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸ್ಥಳಕ್ಕೆ ಧಾವಿಸಿ ರುವ ಕೊಂಕಣ ರೈಲ್ವೆ ಅಧಿಕಾರಿಗಳು ಹಾಗೂ ತಂತ್ರಜ್ಞರು ದುರಸ್ತಿ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಕೆ. ವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಎಂಟು ರೈಲುಗಳ ಮಾರ್ಗವನ್ನು ಬದಲಿಸಲಾಗಿದ್ದು, ಅವುಗಳು ಲೋಂಡಾ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:022-27587939, 10722ನ್ನು ಸಂಪರ್ಕಿಸುವಂತೆ ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಚಾರ ಮಾರ್ಗ ಬದಲಾದ ರೈಲುಗಳ ವಿವರ ಹೀಗಿದೆ

1.ರೈಲು ನಂ.02617 ಎರ್ನಾಕುಲಂ-ನಿಝಾಮುದ್ದೀನ್ ಸೂಪರ್‌ಫಾಸ್ಟ್ ಸ್ಪೆಷನ್ ಏಕ್ಸ್‌ಪ್ರೆಸ್ ಆ.6ರಿಂದ 20ರವರೆಗೆ ಮಡಗಾಂವ್-ಲೋಂಡಾ- ಮೀರಜ್- ಪೂಣೆ-ಪನ್ವೇಲ್- ಕಲ್ಯಾಣ ಮೂಲಕ (15 ಟ್ರಿಪ್) ಸಂಚರಿಸಲಿದೆ.

2.ರೈಲು ನಂ.02618 ನಿಝಾಮುದ್ದೀನ್- ಎರ್ನಾಕುಲಂ ಸೂಪರ್‌ಫಾಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ಆ.6ರಿಂದ 20ವರೆಗೆ ಪನ್ವೇಲ್-ಪುಣೆ-ಮೀರಜ್- ಲೋಂಡಾ- ಮಡಗಾಂವ್ ಮೂಲಕ (15 ಟ್ರಿಪ್) ಸಂಚರಿಸಲಿದೆ.

3.ರೈಲು ನಂ.06346 ತಿರುವನಂತಪುರಂ ಸೆಂಟ್ರಲ್-ಲೋಕಮಾನ್ಯ ತಿಲಕ್ ಸ್ಪೆಷಲ್ ಏಕ್ಸ್‌ಪ್ರೆಸ್ ಆ.6ರಿಂದ 20ರವರೆಗೆ ಮಡಗಾಂವ್- ಲೋಂಡಾ- ಮೀರಜ್- ಪುಣೆ- ಪನ್ವೇಲ್ ಮೂಲಕ (15 ಟ್ರಿಪ್) ಸಂಚರಿಸಲಿದೆ.

4.ರೈಲು ನಂ.06345 ಲೋಕಮಾನ್ಯ ತಿಲಕ್-ತಿರುವನಂತಪುರಂ ಸೆಂಟ್ರಲ್ ಆ.7ರಿಂದ 20ರವರೆಗೆ (14 ಟ್ರಿಪ್) ಪನ್ವೇಲ್- ಪುಣೆ- ಮೀರಜ್- ಲೋಂಡಾ- ಮಡಗಾಂವ್ ಮೂಲಕ ಸಂಚರಿಸಲಿದೆ.

5.ರೈಲು ನಂ.02432 ಹೊಸದಿಲ್ಲಿ- ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಸ್ಪೆಷಲ್ ಎಕ್ಸ್‌ಪ್ರೆಸ್ ಆ.9ರಿಂದ 18ರವರೆಗೆ (6ಟ್ರಿಪ್) ಪನ್ವೇಲ್- ಪುಣೆ- ಮೀರಜ್- ಲೋಂಡಾ- ಮಡಗಾಂವ್ ಮೂಲಕ ಸಂಚರಿಸಲಿದೆ.

6.ರೈಲು ನಂ.02431 ತಿರುವನಂತಪುರಂ ಸೆಂಟ್ರಲ್- ಹೊಸದಿಲ್ಲಿ ರಾಜಧಾನಿ ಸ್ಪೆಷಲ್ ಎಕ್ಸ್‌ಪ್ರೆಸ್ ಆ.6ರಿಂದ 20ರವರೆಗೆ (7 ಟ್ರಿಪ್) ಮಡಗಾಂವ್- ಲೋಂಡಾ- ಮೀರಜ್- ಪುಣೆ-ಪನ್ವೇಲ್ ಮೂಲಕ ಸಂಚರಿಸಲಿದೆ.

7.ರೈಲು ನಂ.02284 ನಿಝಾಮುದ್ದೀನ್-ಎರ್ನಾಕುಲಂ ಡುರಾಂಟೊ ಸ್ಪೆಷಲ್ ಎಕ್ಸ್‌ಪ್ರೆಸ್ ಆ.8ರಿಂದ 15ರವರೆಗೆ(2ಟ್ರಿಪ್) ಪನ್ವೇಲ್- ಪುಣೆ-ಮೀರಜ್- ಲೋಂಡಾ- ಮಡಗಾಂವ್ ಮೂಲಕ ಸಂಚರಿಸಲಿದೆ.

8.ರೈಲು ನಂ.02283 ಎರ್ನಾಕುಲಂ- ನಿಝಾಮುದ್ದೀನ್ ಡುರಾಂಟೊ ಸ್ಪೆಷಲ್ ಎಕ್ಸ್‌ಪ್ರೆಸ್ ಆ.11ರಿಂದ 18ರವರೆಗೆ (2ಟ್ರಿಪ್) ಮಡಗಾಂವ್- ಲೋಂಡಾ- ಮೀರಜ್- ಪುಣೆ- ಪನ್ವೇಲ್ ಮೂಲಕ ಸಂಚರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News