ಬಿಸಿಯೂಟ ನೌಕರರಿಂದ ಪ್ರತಿಭಟನೆ

Update: 2020-08-07 12:27 GMT

ಮಂಗಳೂರು, ಆ.7: ಸ್ಕೀಂ ಕಾರ್ಮಿಕರಾದಂತಹ ಬಿಸಿಯೂಟ, ಆಶಾ ಮತ್ತು ಅಂಗನವಾಡಿ ಕಾರ್ಮಿಕರ ಬೇಡಿಕೆಗಳ ಜಾರಿಗಾಗಿ ಒತ್ತಾಯಿಸಿ ಅಖಿಲ ಭಾರತ ಪ್ರತಿಭಟನೆಗೆ ಕಾರ್ಮಿಕರ ಸಂಘಟನೆಗಳು ಕರೆ ನೀಡಿದ್ದು, ಇಂದು ಮಂಗಳೂರು ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.

ಸಿಐಟಿಯು ನೇತೃತ್ವದ ಅಕ್ಷರದಾಸೋಹ ನೌಕರರ ಸಂಘದ ಮುಂದಾಳತ್ವದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಸಂಘದ ಅಧ್ಯಕ್ಷರಾದ ಪದಾ್ಮವತಿ ಶೆಟ್ಟಿಯವರು ಮಾತನಾಡಿದರು.

ಕೊರೋನ ವೈರಸ್‌ನಿಂದಾಗಿ ಸ್ಕೀಂ ಕಾರ್ಮಿಕರಲ್ಲಿ ಒಂದು ವಿಭಾಗವಾದ ಅಕ್ಷರ ದಾಸೋಹ ನೌಕರರಿಗೆ ಕೆಲಸ ಹಾಗೂ ವೇತನವಿಲ್ಲವಾಗಿದೆ. ಕೊರೋನಾ ವೈರಸ್ ಲಾಕ್‌ಡೌನ್ ಅವಧಿಯ ಹಾಗೂ ಬೇಸಿಗೆ ರಜೆಯ ಪರಿಹಾರವನ್ನು ನೀಡಬೇಕೆಂದು ವಿನಂತಿಸಿದರೂ ಲಕ್ಷಾಂತರ ಕಾರ್ಮಿಕರಿಗೆ ಪರಿಹಾರವನ್ನು ನೀಡಿಲ್ಲ. ಬಿಸಿಯೂಟ ನೌಕರರಿಗೆ ಮುಂದಿನ 6 ತಿಂಗಳ ತನಕ ಕನಿಷ್ಟ 7,500 ರೂ. ರಷ್ಟು ಪರಿಹಾರವನ್ನು ನೇರ ನಗದು ಮಾಡಬೇಕು. ಹಾಗೆನೇ ಮುಂದಿನ 6 ತಿಂಗಳ ತನಕ 10 ಕೆ.ಜಿ.ಆಹಾರ ಧಾನ್ಯವನ್ನು ಉಚಿತವಾಗಿ ರೇಶನ್ ಮೂಲಕ ನೀಡಬೇಕೆಂದು ಅವರು ಒತ್ತಾಯಿಸಿದರು.

ಭಾರತ ಕಾರ್ಮಿಕ ಸಮ್ಮೇಳನದ ನಿರ್ಣಯದಂತೆ ಸ್ಕೀಂ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ ವೇತನ ಕಾಯಿದೆಯ ಅನ್ವಯ ಮಾಸಿಕವಾಗಿ 21,000 ರೂ. ಕನಿಷ್ಟ ಕೂಲಿ ನೀಡಬೇಕಾದಂತಹ ಸರಕಾರ ಎಲ್ಲಾ ರಂಗವನ್ನು ಖಾಸಗೀಕರಣ ಮಾಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕೊರೋನ ವಾರಿಯರ್ಸ್‌ ಆಗಿ ಆಶಾ, ಅಂಗನವಾಡಿ ಮತ್ತು ಬಿಸಿಯೂಟ ನೌಕರರನ್ನೂ ಉಪಯೋಗ ಮಾಡಿದ್ದರೂ ಅವರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಅವರಿಗೆ ಈ ಅವಧಿಯಲ್ಲಿ ಕೆಲಸ ಮಾಡಿರುವುದಕ್ಕೆ ವೇತನವನ್ನು ಕೂಡಾ ನೀಡಿಲ್ಲ. ಕೊರೋನಾ ವಾರಿಯರ್ಸ್‌ ಕೆಲಸ ಮಾಡುವ ಸಂದರ್ಭ ಮರಣ ಅಪ್ಪಿದಲ್ಲಿ ಅವರಿಗೆ ಯಾವುದೇ ಪರಿಹಾರದ ಖಾತರಿಯಿಲ್ಲ. ಆದ್ದರಿಂದ ಕನಿಷ್ಟ 10 ಲಕ್ಷದವರೆಗೆ ವಿಮೆಯನ್ನು ಜಾರಿಗೊಳಿಸಬೇಕು. ಹಾಗೆನೇ ಅಕ್ಷರದಾಸೋಹ ಕಾರ್ಮಿಕರಿಗೆ ಕನಿಷ್ಟ ಮಾಸಿಕ ವೇತನವನ್ನು ಕೂಡಲೇ ರಾಜ್ಯ ಸರಕಾರ ನೀಡಬೇಕು ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಸರಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯ ಮನವಿಯನ್ನು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಕಳುಹಿಸಲಾಯಿತು. ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಮುಖಂಡರಾದ ರೇಖಲತಾ, ರತ್ನಮಾಲಾ, ರೆಮೆಜಾ, ಉಮಾವತಿ, ಅಂಜಲಿ, ಭವಾನಿ, ಪಾರ್ವತನಿ ಅನುರಾಧ, ಭವ್ಯಾ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News