ಜಿ.ರಾಜಶೇಖರ್, ಕಿರಂ ಲೋಕ ನಿಷ್ಠುರಿಗಳು: ಪ್ರೊ.ಫಣಿರಾಜ್

Update: 2020-08-07 12:55 GMT

ಉಡುಪಿ, ಆ.7: ಬೆಂಗಳೂರು ಜನಸಂಸ್ಕೃತಿ ಪ್ರತಿಷ್ಠಾನ ಮತ್ತು ಬೆಂಗಳೂರು ಆರ್ಟ್ ಫೌಂಡೇಶನ್ ಆಶ್ರಯದಲ್ಲಿ ರಥಬೀದಿ ಗೆಳೆಯರು ಉಡುಪಿ ಸಹ ಯೋಗದಲ್ಲಿ ಹಿರಿಯ ಚಿಂತಕ ಜಿ.ರಾಜಶೇಖರ್ ಅವರಿಗೆ ಕಿರಂ ನಾಗರಾಜ್ ನೆನಪಲ್ಲಿ ‘ಕಿರಂ ಪುರಸ್ಕಾರ’ವನ್ನು ಇಂದು ಉಡುಪಿ ಕೊಳಂಬೆಯ ಅವರ ನಿವಾಸದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಚಿಂತಕ ಪ್ರೊ.ಕೆ.ಫಣಿರಾಜ್ ಮಾತನಾಡಿ, ಕಿರಂ ನಾಗರಾಜ್ ಹಾಗೂ ಜಿ.ರಾಜಶೇಖರ್ ತಮ್ಮ ಮನಸ್ಸಿಗೆ ಸ್ಪಷ್ಟವಾಗಿ ಅನಿಸಿದ ವಿಚಾರವವನ್ನು ನೇರವಾಗಿ ಹೇಳುವಂತಹ ಲೋಕ ನಿಷ್ಠುರಿಗಳು. ಈ ಕಾರಣ ದಿಂದ ಯಾವ ಪ್ರಶಸ್ತಿ, ಪುರಸ್ಕಾರದ ಹಂಗಿಲ್ಲದ ಲೋಕ ನಿರಾಭಿಮಾನಿಗಳು ಕೂಡ ಹೌದು. ಬದುಕಿನ ಉದ್ಯೋಗದ ಮಿತಿಯ ಆಚೆ ಗಳಿಸಿದ ಜ್ಞಾನದಿಂದ ಇವರಿಬ್ಬರೂ ಲೋಕಜ್ಞಾನಿಗಳಾಗಿದ್ದಾರೆ. ಲೋಕ ಶಿಕ್ಷಕರಾದ ಇವರಿಬ್ಬರಲ್ಲಿ ಕಲಿತವರ ಬಗ್ಗೆ ಲೆಕ್ಕ ಇಲ್ಲ ಎಂದರು.

ಪ್ರಶಸ್ತಿ ಸ್ವೀಕರಿಸಿದ ಜಿ.ರಾಜಶೇಖರ್ ಮಾತನಾಡಿ, ಸಾಹಿತ್ಯ ನನ್ನ ಉಸಿರು. ಉಸಿರಾಡುವುದಕ್ಕೆ ಯಾವ ಪ್ರಶಸ್ತಿ ಕೂಡ ಬೇಕಾಗಿಲ್ಲ. ಕಿರಂ ಸಾಹಿತ್ಯದ ಮಹಾನ್ ಉತ್ಸಾಹಿಗಳು. ಅಡಿಗರ ಕಾವ್ಯದ ಬಗ್ಗೆ ಅಪಾರ ಜ್ಞಾನ ಹೊಂದಿ ದ್ದರು. ಕಿರಂ ಅವರಿಂದಾಗಿಯೇ ಅಡಿಗರ ಕಾವ್ಯದ ಪ್ರಭಾವ ನನ್ನ ಮೇಲೆ ಬೀರಿದೆ ಎಂದು ಹೇಳಿದರು.

ರಥಬೀದಿ ಗೆಳೆಯರು ಉಪಾಧ್ಯಕ್ಷ ಡಾ.ಸಂತೋಷ್ ಬಲ್ಲಾಳ್, ಸಂತೋಷ್ ಶೆಟ್ಟಿ ಹಿರಿಯಡ್ಕ, ರಾಘವೇಂದ್ರ ರಾವ್, ರಾಜು ಮಣಿಪಾಲ, ಕೌಶಿಕ್ ಚಟ್ಟಿಯಾರ್, ಕೆ.ರವೀಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News