ಚಾರ್ಮಾಡಿ ಘಾಟ್ ನಲ್ಲಿ ಭೂ ಕುಸಿತ : ವಾಹನ ಸಂಚಾರಕ್ಕೆ ಸಂಪೂರ್ಣ ತಡೆ

Update: 2020-08-07 13:10 GMT

ಬೆಳ್ತಂಗಡಿ: ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಭೂ ಕುಸಿತಗಳಾಗುತ್ತಿದೆ. ಆಲೇಖಾನ್ ಹೊರಟಿ ಸಮೀಪ ರಸ್ತೆಯಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದು, ಅಪಾಯಕಾರಿ ಸ್ಥಿತಿಯಿರುವ ಕಾರಣ ಘಾಟಿಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ತಡೆ ಹಿಡಿಯಲಾಗಿದೆ.

ಕರಾವಳಿ ಮತ್ತು ಮಲೆನಾಡಿನ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿಯಲ್ಲಿ ಕಳೆದ ಮೂರು ವರ್ಷಗಳಿಂದ ಭಾರೀ ಪ್ರಮಾಣದ ಕುಸಿತಗಳು ಕಾಣಲಾರಂಭಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಟ್ಟಿಗೆ ಹಾರ ಸಮೀಪದಲ್ಲಿ ಆಲೇಖಾನ್ ಹೊರಟಿ ಎಂಬಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಲ್ಲಿ ಮೂರು ದಿನಗಳ ಹಿಂದೆ ಭೂ ಕುಸಿತವಾಗಿತ್ತು. ರಸ್ತೆಯಲ್ಲಿ ಸುಮಾರು 15 ಫೀಟ್ ಅಂತರದಲ್ಲಿ ಸಮನಾಂತರವಾಗಿ ಎರಡೂ ಕಡೆ ಬಿರುಕು ಕಾಣಿಸಿಕೊಂಡಿದೆ.  ಈ ಬಿರುಕುಗಳ ಮೂಲಕ ನೀರು ಇಳಿಯುತ್ತಿದ್ದು ಇನ್ನಷ್ಟು ಭೂ ಕುಸಿತವಾಗುವ ಆತಂಕವಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೀಗ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಘಾಟಿಯಲ್ಲಿ  ಹಲವೆಡೆ ಭೂ ಕುಸಿತಗಳಾಗಿವೆ ಹಾಗೂ ಮರಗಳು ಉರುಳಿ ಬಿದ್ದಿವೆ. ಅವುಗಳ‌ನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಎರಡು ಮತ್ತು ಮೂರನೇತಿರುವಿನ ನಡುವೆ ಬಿದ್ದಿರುವ ಬೃಹತ್ ಬಂಡೆಯನ್ನು ರಸ್ತೆಯಿಂದ ತೆರವುಗೊಳಿಸಲು ಸಾಧ್ಯವಾಗಿಲ್ಲ. ಆಗಾಗ ಭೂ ಕುಸಿತಗಳಾಗುತ್ತಿದ್ದು ತೆರವು ಕಾರ್ಯಾಚರಣೆಗಾಗಿ ಮೂರು ಜೆಸಿಬಿಗಳು ಘಾಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News