ಮಂಗಳೂರು ಪೊಲೀಸ್ ಗೋಲಿಬಾರ್‌ ಪ್ರಕರಣ : ಆ.11ಕ್ಕೆ ಸಾಕ್ಷ್ಯ-ಹೇಳಿಕೆ ನೀಡಲು ಅಂತಿಮ ಅವಕಾಶ

Update: 2020-08-07 13:13 GMT
ಫೈಲ್ ಫೋಟೊ

ಮಂಗಳೂರು, ಆ. 7: ಮಂಗಳೂರು ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದವರು ಆ.11ರಂದು ಸಾಕ್ಷಿ ಅಥವಾ ಹೇಳಿಕೆಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹಾಗೂ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿಯುಳ್ಳ ಅಥವಾ ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾವುದೇ ವ್ಯಕ್ತಿಗಳು ಮಂಗಳೂರು ನಗರದ ಮಿನಿ ವಿಧಾನ ಸೌಧದ ಮಂಗಳೂರು ಸಹಾಯಕ ಆಯುಕ್ತರ ಕೋರ್ಟ್ ಸಭಾಂಗಣದಲ್ಲಿ ಹಾಜರಾಗಿ ಸಾಕ್ಷಿ ನುಡಿಯಬಹುದು. ತದನಂತರ ಸಾರ್ವಜನಿಕರಿಂದ ಯಾವುದೇ ಸಾಕ್ಷ ಅಥವಾ ಹೇಳಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ 2019ರ ಡಿಸೆಂಬರ್ 19ರಂದು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಗುಂಡೇಟಿನಿಂದ ನೌಶಿನ್ ಹಾಗೂ ಜಲೀಲ್ ಕುದ್ರೋಳಿ ಎಂಬವರು ಮೃತಪಟ್ಟಿರುವ ಬಗ್ಗೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ಉಡುಪಿ ಜಿಲ್ಲಾ ದಂಡಾಧಿಕಾರಿಗೆ ರಾಜ್ಯ ಸರಕಾರ ಆದೇಶಿಸಿತ್ತು. ಬಳಿಕ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿಯು ಹಲವರಿಂದ ಸಾಕ್ಷ-ಹೇಳಿಕೆ ಸಂಗ್ರಹಿಸಿದ್ದರು. ಮಾರ್ಚ್ ಕೊನೆಯ ವಾರ ಕೊರೋನ ಹಾವಳಿ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಸಾಕ್ಷ ಸಂಗ್ರಹ ಪ್ರಕ್ರಿಯೆ ಮುಂದೂಡಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News