ಉಡುಪಿ ಜಿಲ್ಲೆಯಲ್ಲಿ 245 ಮಂದಿಗೆ ಕೊರೋನ ಸೋಂಕು ದೃಢ

Update: 2020-08-07 14:04 GMT

ಉಡುಪಿ, ಆ. 7: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್-19 ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ದ್ವಿಶತಕದ ಗಡಿ ದಾಟಿ 245ಕ್ಕೇರಿದೆ. ಅಲ್ಲದೇ ದಿನದಲ್ಲಿ 1148 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಗಳು ನೆಗೆಟಿವ್ ಫಲಿತಾಂಶ ನೀಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಕೊರೋನ ಸೋಂಕು ಪತ್ತೆಯಾದ 245 ಮಂದಿಯಲ್ಲಿ ಉಡುಪಿ ತಾಲೂಕಿನ 125 ಮಂದಿ, ಕುಂದಾಪುರ ತಾಲೂಕಿನ 92 ಹಾಗೂ ಕಾರ್ಕಳ ತಾಲೂಕಿನ 25 ಮಂದಿ ಸೇರಿದ್ದಾರೆ. ಉಳಿದ ಮೂವರು ಹೊರಜಿಲ್ಲೆಯವರಾ ಗಿದ್ದು, ಜಿಲ್ಲೆಯಲ್ಲಿ ಚಿಕಿತ್ಸೆಗೆ ಬಂದು ಪಾಸಿಟಿವ್ ಆಗಿದ್ದಾರೆ. ಮಕ್ಕಳು ಸೇರಿದಂತೆ 125 ಮಂದಿ ಪುರುಷರು ಹಾಗೂ 120 ಮಂದಿ ಮಹಿಳೆಯರಲ್ಲಿ ಸೋಂಕು ಕಂಡು ಬಂದಿದೆ. ಇವರಲ್ಲಿ 81 ಪುರುಷರು ಹಾಗೂ 94 ಮಹಿಳೆಯರಲ್ಲಿ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಇಂದಿನ 245 ಪಾಸಿಟಿವ್ ಪ್ರಕರಣ ಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 5605ಕ್ಕೇರಿದೆ ಎಂದು ಡಾ.ಸೂಡ ತಿಳಿಸಿದರು.

ಇಂದು ಕೊರೋನ ಪಾಸಿಟಿವ್ ದೃಢಗೊಂಡ 245 ಮಂದಿಯಲ್ಲಿ 91 ಮಂದಿ ಪಾಸಿಟಿವ್ ಬಂದವರ ಸಂಪರ್ಕದಿಂದ, 57 ಮಂದಿ ಶೀತಜ್ವರ ದಿಂದ, 5 ಮಂದಿ ಉಸಿರಾಟ ತೊಂದರೆಯಿಂದ ಬಳಲುತಿದ್ದು ಅವರಲ್ಲಿ ಸೋಂಕು ಕಾಣಿಸಿ ಕೊಂಡಿದೆ. ಆರು ಮಂದಿ ಪ್ರವಾಸದಿಂದ ಮರಳಿದ್ದು, ಪಾಸಿಟಿವ್ ಬಂದರೆ, 86 ಮಂದಿಯ ಸೋಂಕಿ ಸಂಪರ್ಕ ತನಿಖೆಯಲ್ಲಿದೆ ಎಂದರು.

101 ಮಂದಿ ಗುಣಮುಖ: ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 101 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಇವರಲ್ಲಿ 57 ಮಂದಿ ಕೋವಿಡ್ ಆಸ್ಪತ್ರೆಗಳಿಂದ, 44 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 3258ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 2292 ಮಂದಿ ಚಿಕಿತ್ಸೆಯಲ್ಲಿದ್ದು, ಇವರಲ್ಲಿ 1148 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಹಾಗೂ 1144 ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಿಎಚ್‌ಓ ಹೇಳಿದರು.

1357 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಇಂದು 1357 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 928 ಮಂದಿ, ಕೋವಿಡ್ ಸಂಪರ್ಕಿತರು 241 ಮಂದಿ ಇದ್ದರೆ, ಉಸಿರಾಟ ತೊಂದರೆಯ ಇಬ್ಬರು, ಶೀತಜ್ವರದಿಂದ ಬಳಲುವ 44 ಮಂದಿ ಹಾಗೂ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 152 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ 1357 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 41,411ಕ್ಕೇರಿದೆ. ಇವುಗಳಲ್ಲಿ ಈವರೆಗೆ 34,603 ನೆಗೆಟಿವ್, 5605 ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಈವರೆಗೆ 55 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಒಟ್ಟು 1203 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ ಎಂದು ಡಾ.ಸೂಡ ವಿವರಿಸಿದರು.

ಜಿಲ್ಲೆಯಲ್ಲಿ ಶುಕ್ರವಾರ 245 ಮಂದಿಯನ್ನು ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ 15 ಮಂದಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ, 120 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ, 21 ಮಂದಿ ಕೋವಿಡ್ ಹೆಲ್ತ್ ಸೆಂಟರ್‌ಗಳಲ್ಲಿ ಹಾಗೂ 89 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಇದ್ದಾರೆ. ಜಿಲ್ಲೆಯಲ್ಲಿ ಈಗ ಒಟ್ಟು 1485 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ ಎಂದು ಅವರು ಹೇಳಿದರು.

ದಿನದಲ್ಲಿ ಒಬ್ಬರ ಸಾವು: ಶುಕ್ರವಾರ ಜಿಲ್ಲೆಯಲ್ಲಿ 78 ವರ್ಷ ಪ್ರಾಯದ ಮಹಿಳೆ ಕೋವಿಡ್-19 ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ. ಇವರು ಮಧುಮೇಹ ಹಾಗೂ ಕಿಡ್ನಿ ಸಮಸ್ಯೆಗಳೊಂದಿಗೆ ಉಸಿರಾಟದ ತೊಂದರೆ ಹಾಗೂ ಶೀತಜ್ವರದಿಂದಲೂ ನರಳುತಿದ್ದರು.
ಈ ಮೂಲಕ ಜಿಲ್ಲೆಯಲ್ಲಿ ಕೊರೋನ ಸೋಂಕಿನೊಂದಿಗೆ ಸತ್ತವರ ಸಂಖ್ಯೆ 55ಕ್ಕೇರಿದೆ. ನಿನ್ನೆ ಕಾರ್ಕಳದ 49 ವರ್ಷ ಪ್ರಾಯದ ಪುರುಷ, ಕುಂದಾಪುರದ 75, 70 ಹಾಗೂ 65 ವರ್ಷ ಪ್ರಾಯದ ಪುರುಷರು ಸಾವನ್ನಪ್ಪಿದ್ದಾರೆ ಎಂದು ಇಲಾಖೆಯ ದಿನದ ಕೋವಿಡ್-19ರ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News