‘ಮಸೀದಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂಬ ಆದಿತ್ಯನಾಥ್ ಹೇಳಿಕೆ ಕುರಿತು ವಿವಾದ ಸೃಷ್ಟಿ

Update: 2020-08-07 14:10 GMT

ಲಕ್ನೋ, ಆ.7: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮಸೀದಿಯ ಉದ್ಘಾಟನೆಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂಬ ಹೇಳಿಕೆಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಕ್ಷಮೆ ಯಾಚಿಸಬೇಕೆಂದು ಸಮಾಜವಾದಿ ಪಕ್ಷವು ಶುಕ್ರವಾರ ಆಗ್ರಹಿಸಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ನಡೆದ ಬಳಿಕ ಟಿವಿ ವಾಹಿನಿಯೊಂದಿಗೆ ಮಾತನಾಡಿದ್ದ ಆದಿತ್ಯನಾಥ್, ಓರ್ವ ಯೋಗಿ ಮತ್ತು ಹಿಂದುವಾಗಿ ತಾನು ಮಸೀದಿ ಉದ್ಘಾಟನೆಗೆ ತೆರಳುವಂತಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆಗಾಗಿ ಆದಿತ್ಯನಾಥರನ್ನು ಶುಕ್ರವಾರ ಟೀಕಿಸಿದ ಸಮಾಜವಾದಿ ಪಕ್ಷದ ವಕ್ತಾರ ಪವನ ಪಾಂಡೆ ಅವರು, ಮುಖ್ಯಮಂತ್ರಿಗಳು ಅಧಿಕಾರ ಗ್ರಹಣದ ವೇಳೆ ಸ್ವೀಕರಿಸಿದ್ದ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಅವರು ಹಿಂದು ಸಮುದಾಯಕ್ಕೆ ಮಾತ್ರವಲ್ಲ, ಇಡೀ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಹಿಂದುಗಳು ಮತ್ತು ಮುಸ್ಲಿಮರ ಜನಸಂಖ್ಯೆ ಏನೇ ಇರಲಿ,ಅವರು ಎಲ್ಲರ ಮುಖ್ಯಮಂತ್ರಿಗಳಾಗಿದ್ದಾರೆ. ಮುಖ್ಯಮಂತ್ರಿಗಳ ಈ ಭಾಷೆಯಲ್ಲಿ ಘನತೆಯ ಕೊರತೆಯಿದೆ. ಇದಕ್ಕಾಗಿ ಅವರು ಜನತೆಯ ಕ್ಷಮೆಯನ್ನು ಯಾಚಿಸಬೇಕು ಎಂದರು.

ಆದಿತ್ಯನಾಥರ ಮಸೀದಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಲು ಉ.ಪ್ರ.ಕಾಂಗ್ರೆಸ್ ಮಾಧ್ಯಮ ಕೋಶ ಸಂಚಾಲಕ ಲಲನ್ ಕುಮರ್ ನಿರಾಕರಿಸಿದರು.

‘ಓರ್ವ ಮುಖ್ಯಮಂತ್ರಿಯಾಗಿ ನನಗೆ ಯಾವುದೇ ನಂಬಿಕೆ, ಧರ್ಮ ಅಥವಾ ಸಮುದಾಯದೊಂದಿಗೆ ಸಮಸ್ಯೆಯಿಲ್ಲ. ಆದರೆ ಓರ್ವ ಯೋಗಿಯಾಗಿ ನನ್ನನ್ನು ಕೇಳಿದರೆ ನಾನು ಖಂಡಿತವಾಗಿಯೂ ಮಸೀದಿ ಉದ್ಘಾಟನೆಗೆ ಹೋಗುವುದಿಲ್ಲ, ಏಕೆಂದರೆ ಓರ್ವ ಹಿಂದುವಾಗಿ ನನ್ನ ಉಪಾಸನಾ ವಿಧಿಯನ್ನು ಅಭಿವ್ಯಕ್ತಿಸುವ ಹಕ್ಕು ನನಗಿದೆ’ ಎಂದು ಟಿವಿ ವಾಹಿನಿಗೆ ತಿಳಿಸಿದ್ದ ಆದಿತ್ಯನಾಥ್, ತಾನು ವಾದಿಯೂ ಅಲ್ಲ, ಪ್ರತಿವಾದಿಯೂ ಅಲ್ಲ. ಹೀಗಾಗಿ ತನ್ನನ್ನು ಆಹ್ವಾನಿಸಲಾಗುವುದಿಲ್ಲ, ತಾನು ಹೋಗುವುದೂ ಇಲ್ಲ. ತನಗೆ ಇಂತಹ ಆಹ್ವಾನ ದೊರೆಯುವುದಿಲ್ಲ. ಅವರು ತನ್ನನ್ನು ಆಹ್ವಾನಿಸಿದ ದಿನ ಹಲವರ ಜಾತ್ಯತೀತತೆಯು ಅಪಾಯಕ್ಕೆ ಸಿಲುಕುತ್ತದೆ. ಅವರ ಜಾತ್ಯತೀತತೆ ಅಪಾಯದಲ್ಲಿ ಸಿಲುಕಬಾರದು ಎಂದು ತಾನು ಬಯಸುತ್ತೇನೆ ಮತ್ತು ಯಾವುದೇ ತಾರತಮ್ಯವಿಲ್ಲದೆ ಸರಕಾರಿ ಯೋಜನೆಗಳ ಲಾಭಗಳು ಪ್ರತಿಯೊಬ್ಬರಿಗೂ ದೊರಕುವಂತಾಗಲು ಮೌನವಾಗಿ ಕೆಲಸ ಮಾಡುತ್ತೇನೆ ಎಂದಿದ್ದರು.

ಕಾಂಗ್ರೆಸ್ ಪಕ್ಷವೆಂದೂ ಮಂದಿರ-ಮಸೀದಿ ವಿವಾದಕ್ಕೆ ಪರಿಹಾರವನ್ನು ಬಯಸಿರಲಿಲ್ಲ, ತನ್ನ ರಾಜಕೀಯ ಲಾಭಕ್ಕಾಗಿ ವಿವಾದ ಮುಂದುವರಿಯಬೇಕೆಂದು ಅದು ಬಯಸಿತ್ತು ಎಂದು ಹೇಳಿದ್ದ ಆದಿತ್ಯನಾಥ್, ಟೋಪಿಯನ್ನು ಧರಿಸಿ ರೋಝಾ-ಇಫ್ತಾರ್‌ಗಳಲ್ಲಿ ಭಾಗವಹಿಸುವುದು ಜಾತ್ಯತೀತತೆಯಲ್ಲ. ಇದು ನಾಟಕ ಎನ್ನುವುದು ಜನರಿಗೂ ಗೊತ್ತು, ನಿಜ ಏನು ಎನ್ನುವುದು ಅವರಿಗೆ ತಿಳಿದಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News