ವಾಣಿಜ್ಯ ಉದ್ದೇಶಕ್ಕೆ ಅನಧಿಕೃತ ಅಂತರ್ಜಲ ಬಳಕೆಯು ಕ್ರಿಮಿನಲ್ ಅಪರಾಧ: ಎನ್‌ಜಿಟಿ

Update: 2020-08-07 14:41 GMT

ಹೊಸದಿಲ್ಲಿ, ಆ.7: ವಾಣಿಜ್ಯ ಬಳಕೆಗೆ ಅಂತರ್ಜಲವನ್ನು ಬಳಸಲು ಮುಕ್ತ ಹಕ್ಕು ಯಾರಿಗೂ ಇಲ್ಲ ಮತ್ತು ಅನುಮತಿಯಿಲ್ಲದೆ ಹಾಗೆ ಮಾಡುವುದು ಕ್ರಿಮಿನಲ್ ಅಪರಾಧವಾಗುತ್ತದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ವು ಶುಕ್ರವಾರ ಹೇಳಿದೆ.

ಬಲವಂತದಿಂದ ಅಂತರ್ಜಲದ ವಾಣಿಜ್ಯ ಬಳಕೆಯನ್ನು ತಡೆಯುವುದು ಮತ್ತು ಕಾನೂನು ಉಲ್ಲಂಘಿಸುವವರಿಂದ ದಂಡವನ್ನು ವಸೂಲು ಮಾಡುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಕರ್ತವ್ಯವಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.

ಪಾಣಿಪತ್‌ನ ಕೈಗಾರಿಕಾ ಘಟಕವೊಂದು ಅಕ್ರಮವಾಗಿ ಅಂತರ್ಜಲವನ್ನು ಬಳಸಿಕೊಳ್ಳುತ್ತಿದೆ ಮತ್ತು ಮಲಿನ ನೀರನ್ನು ಚರಂಡಿಗೆ ಬಿಡುತ್ತಿದೆ ಎಂದು ಆರೋಪಿಸಿ ಹರ್ಯಾಣ ನಿವಾಸಿ ರಾಜಕುಮಾರ ಸಿಂಘಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಎನ್‌ಜಿಒ ಅಧ್ಯಕ್ಷ ನ್ಯಾ.ಎ.ಕೆ.ಗೋಯೆಲ್ ನೇತೃತ್ವದ ಪೀಠವು,ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅದರ ಬಳಕೆಯು ನಿಯಂತ್ರಿಸಲ್ಪಡಬೇಕು. ಅಂತರ್ಜಲವನ್ನು ತೆಗೆಯುವುದರಿಂದ ಪರಿಸರದ ಮೇಲೆ ಪರಿಣಾಮ ಕುರಿತು ಅಧ್ಯಯನ ನಡೆಯಬೇಕಿದೆ. ವಾಣಿಜ್ಯ ಉದ್ದೇಶಕ್ಕಾಗಿ ಅಂತರ್ಜಲವನ್ನು ತೆಗೆಯುವ ಮುಕ್ತ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿತು.

ಪಾಣಿಪತ್‌ನ ಕೈಗಾರಿಕಾ ಘಟಕವು ಪ್ರದೇಶದಲ್ಲಿನ ಅಂತರ್ಜಲ ತೆಗೆಯುತ್ತಿರುವುದನ್ನು ತಾನು ಗಮನಿಸಿದ್ದೇನೆ ಎಂದು ಹೇಳಿದ ಎನ್‌ಜಿಟಿಯು,ಅದರ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಹರ್ಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News