ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಈವರೆಗೆ 67.39 ಲಕ್ಷ ರೂ.ಹಾನಿ : ಐದು ಜೀವ ನಷ್ಟ

Update: 2020-08-07 15:04 GMT

ಉಡುಪಿ, ಆ.7: ಉಡುಪಿ ಜಿಲ್ಲೆಯಲ್ಲಿ 2020ನೇ ಸಾಲಿನ ಮಳೆಗಾಲದಲ್ಲಿ ಇದುವರೆಗೆ ಐದು ಮಾನವ ಜೀವಹಾನಿಯೂ ಸೇರಿದಂತೆ ಒಟ್ಟು 67.39 ಲಕ್ಷ ರೂ. ಮೊತ್ತದ ಸೊತ್ತು, ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿವೆ. ಇವುಗಳಲ್ಲಿ ಈವರೆಗೆ 31.81 ಲಕ್ಷ ರೂ.ಗಳ ಪರಿಹಾರದ ಮೊತ್ತವನ್ನು ಸಂತ್ರಸ್ಥರಿಗೆ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ಸರಾಸರಿ 2699ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆ ಮಳೆಗಿಂತ ಶೇ.10ರಷ್ಟು ಕಡಿಮೆಯಾಗಿದೆ. ಆದರೆ ಜಿಲ್ಲೆಯಲ್ಲಿ ಆ.1ರಿಂದ 5ರವರೆಗೆ ಐದು ದಿನಗಳಲ್ಲಿ 248 ಮಿ.ಮೀ. ಮಳೆ ಸುರಿದಿದ್ದು, ಇದು ವಾಡಿಕೆಗಿಂತ ಶೇ.32ರಷ್ಟು ಹೆಚ್ಚಾಗಿರುತ್ತದೆ.

ಕಳೆದ ಆ.4ರಂದು ಬೈಂದೂರು ತಾಲೂಕಿನ ನಾವುಂದ, ಬಡಾಕೆರೆ, ನಾಡಾ ಗ್ರಾಮಗಳ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವೇ ಗಂಟೆಗಳಲ್ಲಿ ನೆರೆ ನೀರು ಇಳಿದು ಹೋಗಿತ್ತು. ಇದರಿಂದ ಯಾವುದೇ ಕುಟುಂಬವನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಪ್ರಮೇಯ ಬಂದಿರಲಿಲ್ಲ. ಕೃಷಿ ಗದ್ದೆಗಳಲ್ಲಿ ನೀರು ನಿಂತು ಆಗಿರುವ ಕೃಷಿ ಹಾನಿಯ ವಿವರಗಳನ್ನು ಕಲೆ ಹಾಕಲಾಗುತ್ತಿದೆ.

ಸಮಿತಿಗಳ ರಚನೆ: ತುರ್ತು ನಿರ್ವಹಣೆಗೆ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾದಿಕಾರಕ್ಕೆ ಬೇಕಾದ ರಕ್ಷಣಾ ಸಾಮಗ್ರಿಗಳನ್ನು ವಿತರಿಸಲಾಗಿದೆ. ಎನ್‌ಡಿಆರ್‌ಎಫ್ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿರಲಾಗಿದೆ.
 ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ 30ರಂತೆ 210 ಯುವ ಸ್ವಯಂ ಸೇವಕರ ತಂಡ ಗಳನ್ನು ರಚಿಸಿದ್ದು, ಇವರಿಗೆ ನೆಹರು ಯುವ ಕೇಂದ್ರದ ನೇತೃತ್ವ ದಲ್ಲಿ ಎನ್‌ಡಿಆಪ್‌ಎಫ್-10 ಬೆಟಾಲಿಯನ್‌ನಿಂದ ಒಂದು ವಾರದ ತರಬೇತಿ ನೀಡಲಾಗಿದೆ. ತುರ್ತು ಕಾರ್ಯಾಚರಣೆ ಪಡೆಯನ್ನು ರಚಿಸಿ ತರಬೇತಿ ನೀಡಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಅದೇ ರೀತಿ ಕಡಲ ತೀರದಲ್ಲಿ 20 ಮಂದಿ ಗೃಹ ರಕ್ಷಕ ಸಿಬ್ಬಂದಿಗಳ ತಂಡವನ್ನು ರಚಿಸಿ ಸಾರ್ವಜನಿಕರು ಕಡಲಿಗಿಳಿಯದಂತೆ ನೋಡಿಕೊಳ್ಳಲಾಗುತ್ತಿದೆ.

ರಸ್ತೆ, ಸೇತುವೆಗಳಿಗೆ 38 ಕೋಟಿ ರೂ.ನಷ್ಟ:  ಈ ಬಾರಿಯ ಮಳೆ- ಗಾಳಿಯಿಂದ ಕಡಲುಕೊರೆತ, ರಸ್ತೆ, ಸೇತುವೆಗಳಿಗೆ ಆಗಿರುವ ಹಾನಿಯ ಮೊತ್ತವನ್ನು 38.53 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಉಡುಪಿ ವಿಭಾಗದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ನೀಡಿರುವ ವರದಿಯಂತೆ ಇದುವರೆಗೆ 2115ಮೀ. ಉದ್ದದಲ್ಲಿ ಕಡಲು ಕೊರೆತ ಉಂಟಾಗಿದ್ದು ಇದರಿಂದ 18.95 ಕೋಟಿ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಉಡುಪಿ ವಿಭಾಗ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ನೀಡಿರುವ ವರದಿಯಂತೆ ಜಿಲ್ಲೆಯಲ್ಲಿ 337.85ಮೀ. ಉದ್ದದ 159 ರಸ್ತೆಗಳು ಮಳೆಯಿಂದ ಹಾನಿಗೊಂಡಿದ್ದು ಇದರಿಂದ 14.41 ಕೋಟಿ ರೂ., 43 ಸೇತುವೆಗಳಿಗೆ 4.71 ಕೋಟಿ ರೂ. ಹಾಗೂ 28 ಕಟ್ಟಡಗಳಿಗೆ 1.50 ಕೋಟಿ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಉಡುಪಿ ಜಿಲ್ಲೆಗೆ 2019-20ನೇ ಸಾಲಿನಲ್ಲಿ ಪ್ರವಾಹ ಪರಿಹಾರ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳ ಪ್ರಾಕೃತಿಕ ವಿಕೋಪ ನಿಧಿಗೆ 20 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಇದರಡಿಯಲ್ಲಿ ಒಟ್ಟು 814 ಶಾಲೆ, ಅಂಗನವಾಡಿ ಹಾಗೂ ರಸ್ತೆ ದುರಸ್ಥಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ 739 ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಉಳಿದ 75 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಪ್ರಕಟಣೆ ವಿವರಿಸಿದೆ.

ಐದು ಮಾನವ ಜೀವಹಾನಿ

2020ನೇ ಸಾಲಿನ ಮಳೆಗಾಲದಲ್ಲಿ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು ಐದು ಮಾನವ ಜೀವ ಹಾನಿಯಾಗಿದೆ. ಇವುಗಳಲ್ಲಿ ಈಗಾಗಲೇ ಮೂವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ.ಗಳಂತೆ ಒಟ್ಟು 15 ಲಕ್ಷ ರೂ.ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. ಅಲ್ಲದೇ ಆರು ಜಾನುವಾರಗಳು ಸತ್ತಿದ್ದು 1.65 ಲಕ್ಷ ರೂ.ಗಳಲ್ಲಿ 1.40 ಲಕ್ಷ ರೂ.ಪರಿಹಾರ ವಿತರಿಸಲಾಗಿದೆ.

32 ತೋಟಗಾರಿಕಾ ಬೆಳೆ ಪ್ರಕರಣಗಳಲ್ಲಿ 3.05 ಲಕ್ಷ ರೂ.ಹಾನಿಯಾಗಿದ್ದು ಇವುಗಳಲ್ಲಿ 23 ಪ್ರಕರಣಗಳಿಗೆ 74ಸಾವಿರ ರೂ., ವಾಸ್ತವ್ಯದ ಎರಡು ಮನೆಗಳ ಸಂಪೂರ್ಣ ಹಾನಿಗೆ 1.90 ಲಕ್ಷ ರೂ.ವಿತರಿಸಲಾಗಿದೆ. ಭಾಗಶ: ಹಾನಿಯಾದ 168 ಮನೆಗಳಿಗೆ 32.47 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದ್ದು, ಇವುಗಳಲ್ಲಿ 136 ಮನೆಗಳಿಗೆ 12.65 ಲಕ್ಷ ರೂ.ವಿತರಿಸಲಾಗಿದೆ. ಒಂದು ದನದ ಕೊಟ್ಟಿಗೆಗೆ 1.47 ಲಕ್ಷ ರೂ. ಹಾನಿ ಹಾಗೂ ಏಳು ಇತರ ಪ್ರಕರಣಗಳಲ್ಲಿ 1.85 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News