ಉಡುಪಿ: ಅಂಗನವಾಡಿ, ಅಕ್ಷರದಾಸೋಹ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

Update: 2020-08-07 15:02 GMT

ಉಡುಪಿ, ಆ.7: ಕರ್ನಾಟಕ ರಾಜ್ಯ ಅಂಗನವಾಡಿ ಮತ್ತು ಅಕ್ಷರ ದಾಸೋಹ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಕೊರೋನ ವಾರಿಯರ್ಸ್ ಆಗಿ ದುಡಿಯು ತ್ತಿರುವ ಅಂಗನವಾಡಿ, ಆಶಾ, ಅಕ್ಷರದಾಸೋಹ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಉಡುಪಿ, ಬ್ರಹ್ಮಾವರ, ಕುಂದಾಪುರಗಳಲ್ಲಿ ಧರಣಿ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸ ಲಾಯಿತು.

ಉಡುಪಿಯಲ್ಲಿ ನಡೆದ ಧರಣಿಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೊರೋನ ತಡೆಗಟ್ಟಲು ಸ್ಕೀಂ ನೌಕರರು ಹಗಲು -ರಾತ್ರಿ ದುಡಿಯುತ್ತಿದ್ದಾರೆ. ಈ ನೌಕರರು ಬದುಕಲು ಕುಟುಂಬ ರಕ್ಷಣೆ ಮಾಡಿ ಕೊಳ್ಳಲು ಗೌರವವಿಲ್ಲದ ವೇತನ ನೀಡಲಾಗುತ್ತಿದೆ. ಸ್ವರಕ್ಷಣೆ ಮಾಡಿಕೊಳ್ಳಲು ಯಾವುದೇ ಪರಿಕರಗಳನ್ನೂ ನೀಡುತ್ತಿಲ್ಲ. ಆದುದರಿಂದ ಸರಕಾರ ಕೂಡಲೇ ಸ್ಕೀಂ ನೌಕರರನ್ನು ಭಾರತ ರಾಷ್ಟೀಯ ಸಮ್ಮೇಳನದ ಕರೆಯಂತೆ ಕಾರ್ಮಿಕರು ಎಂದು ಪರಿಗಣಿಸಿ ಅವರಿಗೆ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಉಡುಪಿಯ ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘದ ಉಡುಪಿ ತಾಲೂಕು ಅಧ್ಯಕ್ಷೆ ಅಂಬಿಕಾ, ಕಾರ್ಯದರ್ಶಿ ಭಾರತಿ, ಪುಷ್ಪ, ಶಕುಂತಲಾ, ಅಕ್ಷರ ದಾಸೋಹ ಸಂಘದ ಅಧ್ಯಕ್ಷೆ ಸುನಂದ, ಕಾರ್ಯದರ್ಶಿ ಕಮಲ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಿಐಟಿಯುನ ಉಡುಪಿ ತಾಲೂಕು ಅಧ್ಯಕ್ಷ ರಾಮ ಕಾರ್ಕಡ, ಕಾರ್ಯದರ್ಶಿ ಕವಿರಾಜ್ ಎಸ್., ಮೋಹನ್, ವಿದ್ಯಾರಾಜ್ ಉಪಸ್ಥಿತರಿದ್ದರು.

ಕುಂದಾಪುರದ ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ ಮಾತನಾಡಿದರು. ಸಿಐಟಿಯು ಮುಖಂಡರಾದ ಎಚ್.ನರಸಿಂಹ, ಸುರೇಶ್ ಕಲ್ಲಾಗರ, ನೌಕರರ ಸಂಘದ ಬಿ.ಆಶಾಲತಾ ಶೆಟ್ಟಿ, ಭಾಗ್ಯ, ಶಾಂತ, ಅಕ್ಷರ ದಾಸೋಹ ಸಂಘದ ನಾಗರತ್ನ, ಗೀತಾ ಉಪಸ್ಥಿತರಿದ್ದರು.

ಬ್ರಹ್ಮಾವರದಲ್ಲಿ ನಡೆದ ಧರಣಿಯಲ್ಲಿ ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ, ಅಂಗನವಾಡಿ ನೌಕರರ ಸಂಘದ ಸರೋಜ, ಹರಿಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News