ಹೆರಿಟೇಜ್ ವಿಲೇಜ್‌ಗೆ ಕಂದಾಯ ಸಚಿವ ಅಶೋಕ್ ಭೇಟಿ

Update: 2020-08-08 14:36 GMT

ಉಡುಪಿ, ಆ.8: ರಾಜ್ಯದ ಕಂದಾಯ ಸಚಿವ ಆರ್. ಆಶೋಕ್ ಅವರು ಶನಿವಾರ ಮಣಿಪಾಲದ ಹೆರಿಟೇಜ್ ವಿಲೇಜ್ (ಪಾರಂಪರಿಕ ಗ್ರಾಮ)ಗೆ ಭೇಟಿ ನೀಡಿ, ಇಲ್ಲಿರುವ ಪುರಾತನ ಪಾರಂಪರಿಕ ಮನೆಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರ ಮನವಿಗೆ ಸ್ಪಂಧಿಸಿದ ಅಶೋಕ್, ಹೆರಿಟೇಜ್ ವಿಲೇಜ್‌ನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಸರಕಾರದಿಂದ ಸಿಗುವ ಎಲ್ಲಾ ಸಹಾಯ ಮಾಡುವುದಾಗಿ ಭರವಸೆ ಯನ್ನು ನೀಡಿದರು.

ಮಣಿಪಾಲದ ಸಂಸ್ಕೃತಿ ಚಿಂತಕ ದಿ.ವಿಜಯನಾಥ ಶೆಣೈ ಅವರು ನಾಡಿನ ವಿವಿದೆಡೆಗಳ ಪುರಾತನ ಕಾಲದ ಮನೆಗಳನ್ನು ಇಲ್ಲಿ ಯಥಾವತ್ತಾಗಿ ನಿರ್ಮಿಸಿದ್ದು, ಅವುಗಳು ದೇಶ-ವಿದೇಶದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ. ಇದನ್ನೊಂದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕೆಂದು ಶಾಸಕರು ಸಚಿವ ಅಶೋಕ್‌ರಲ್ಲಿ ಮನವಿ ಮಾಡಿದ್ದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ವಾಸ್ತುಶಿಲ್ಪಿ ಹರೀಶ್ ಪೈ, ಪೊಲೀಸ್ ಉಪಅಧೀಕ್ಷಕ ಜೈಶಂಕರ್, ಮಣಿಪಾಲ ವೃತ್ತ ನಿರೀಕ್ಷಕ ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News