12 ಶಾಸಕರು ಪ್ರವಾಸಕ್ಕೆ ತೆರಳಿರುವುದು ಗೊತ್ತಿದೆ, ಬಿಜೆಪಿಯಲ್ಲಿ ಒಗ್ಗಟ್ಟಿದೆ: ಪಕ್ಷದ ರಾಜ್ಯಾಧ್ಯಕ್ಷ ಪುನಿಯಾ

Update: 2020-08-08 18:33 GMT

ಜೈಪುರ,ಆ.8: ಪಕ್ಷದ 12 ಶಾಸಕರು ಪ್ರವಾಸಕ್ಕೆ ತೆರಳಿರುವುದು ತನಗೆ ತಿಳಿದಿದೆ ಎಂದು ಶನಿವಾರ ತಿಳಿಸಿದ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ ಪುನಿಯಾ ಅವರು,ತಮ್ಮ ಪಕ್ಷದ ಶಾಸಕರ ಬಗ್ಗೆ ಕಾಂಗ್ರೆಸ್ ವದಂತಿಗಳನ್ನು ಹರಡುತ್ತಿದೆ ಎಂದು ಆರೋಪಿಸಿದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪುನಿಯಾ, ‘ರಾಜಸ್ಥಾನ ಬಿಜೆಪಿಯಲ್ಲಿ ಒಗ್ಗಟ್ಟಿದೆ. ಹೀಗಾಗಿ ಬಿಜೆಪಿ ಶಾಸಕಾಂಗ ಪಕ್ಷವು ಸಭೆ ಸೇರಿದಾಗ ಪ್ರವಾಸದಲ್ಲಿರುವ ಶಾಸಕರೂ ಸಭೆಯಲ್ಲಿ ಉಪಸ್ಥಿತರಿರುತ್ತಾರೆ. ಕಾಂಗ್ರೆಸ್ ಬಿಜೆಪಿ ಶಾಸಕರ ಕುರಿತು ವದಂತಿಗಳನ್ನು ಹರಡುತ್ತಿದೆ ಮತ್ತು ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಕೀಳುಮಟ್ಟದ ರಾಜಕೀಯದಲ್ಲಿ ತೊಡಗಿದ್ದಾರೆ. ನಮ್ಮ ಶಾಸಕರಲ್ಲಿ ನಮಗೆ ವಿಶ್ವಾಸವಿದೆ ಮತ್ತು ಪಕ್ಷವು ಒಗ್ಗಟ್ಟಾಗಿರುತ್ತದೆ. ಕಾಂಗ್ರೆಸ್ ತನ್ನದೇ ಶಾಸಕರನ್ನೂ ನಂಬುವುದಿಲ್ಲ ’ಎಂದು ಹೇಳಿದರು.

‘ರಾಜಸ್ಥಾನ ಪೊಲೀಸರು ಮುಖ್ಯಮಂತ್ರಿಗಳ ಏಜಂಟರಂತೆ ಕೆಲಸ ಮಾಡುತ್ತಿದ್ದಾರೆ ಮತ್ತು ನಮ್ಮ ಶಾಸಕರನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ ಪುನಿಯಾ,ಹೀಗಾಗಿ ನಾವು ನಮ್ಮ ಶಾಸಕರನ್ನು ಪ್ರವಾಸಕ್ಕೆ ಕಳುಹಿಸಿದ್ದೇವೆ ಎಂದರು.

 ತನ್ಮಧ್ಯೆ ಚೋಮು ಶಾಸಕ ಹಾಗೂ ಬಿಜೆಪಿ ವಕ್ತಾರ ರಾಮಲಾಲ ಶರ್ಮಾ ಅವರು,ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರಕಾರವು ಅಧಿಕಾರವನ್ನು ದುರುಪಯೋಗಿಸುತ್ತಿದೆ ಮತ್ತು ಕಾಂಗ್ರೆಸ್‌ಗೆ ಸೇರುವಂತೆ ಪಕ್ಷದ ಶಾಸಕರಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಆರೋಪಿಸಿದ್ದಾರೆ.

ಗೆಹ್ಲೋಟ್ ಸಾಕಷ್ಟು ಸಂಖ್ಯೆಯ ಶಾಸಕರ ಬೆಂಬಲವನ್ನು ಹೊಂದಿದ್ದಾರಾದರೂ,ಅವರು ಜನತೆಯ ವಿಶ್ವಾಸ ಮತ್ತು ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ರಾಜಸ್ಥಾನ ವಿಧಾನಸಭಾ ಅಧಿವೇಶನವು ಆ.14ರಿಂದ ಆರಂಭಗೊಳ್ಳಲಿದೆ.

ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ನಡುವಿನ ಭಿನ್ನಾಭಿಪ್ರಾಯಗಳು ತೀವ್ರಗೊಂಡು ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಕಾಂಗ್ರೆಸ್ ಶಾಸಕರನ್ನು ಜೈಪುರದ ಫೇರ್‌ಮಾಂಟ್ ಹೋಟೆಲ್‌ನಲ್ಲಿರಿಸಲಾಗಿತ್ತು.

ಗೆಹ್ಲೋಟ್ ಸರಕಾರವನ್ನು ಉರುಳಿಸಲು ಬಿಜೆಪಿಯು ‘ಕುದುರೆ ವ್ಯಾಪಾರ ’ದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಬಿಜೆಪಿಯು ಇದನ್ನು ತಿರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News