ದ.ಕ. ಜಿಲ್ಲೆ : ಕೋವಿಡ್‌ಗೆ ಮತ್ತೆ ಆರು ಬಲಿ, 132 ಮಂದಿಗೆ ಕೊರೋನ ಸೋಂಕು

Update: 2020-08-09 14:13 GMT

ಮಂಗಳೂರು, ಆ.9: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದ್ದು, ಜನರಲ್ಲಿ ಆಶಾಭಾವನೆ ಮೂಡಿದೆ. ರವಿವಾರ ಒಟ್ಟು 132 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದರೆ, 195 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ ಆರು ಮಂದಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ತಲಾ ಇಬ್ಬರು, ಸುಳ್ಯ ಒಂದು, ಹೊರ ಜಿಲ್ಲೆಯ ಓರ್ವರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 220 ಮಂದಿ ಕೊರೋನ ಸೋಂಕಿತರು ಸಾವನ್ನಪ್ಪಿದಂತಾಗಿದೆ.

132 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಮತ್ತೆ 132 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಈ ಪೈಕಿ 68 ಸಾಮಾನ್ಯ ಶೀತ ಜ್ವರ ಪ್ರಕರಣ, ಉಸಿರಾಟ ಸಮಸ್ಯೆಯ 11 ಪ್ರಕರಣ ಮತ್ತು 21 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. 32 ಮಂದಿಯ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

132 ಮಂದಿ ಸೋಂಕಿತರ ಪೈಕಿ 81 ಮಂದಿ ಮಂಗಳೂರು ತಾಲೂಕಿನವರು. ಇನ್ನುಳಿದಂತೆ ಬಂಟ್ವಾಳ-22, ಪುತ್ತೂರು-6, ಬೆಳ್ತಂಗಡಿ-4, ಸುಳ್ಯ-3, ಹೊರಜಿಲ್ಲೆಯ 16 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ದ.ಕ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 7,207 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದಾರೆ. ಈ ಪೈಕಿ ಮಂಗಳೂರು ತಾಲೂಕಿನಲ್ಲಿ 5,023 ಮಂದಿ, ಬಂಟ್ವಾಳ-689, ಬೆಳ್ತಂಗಡಿ-370, ಪುತ್ತೂರು-351, ಮೂಡುಬಿದಿರೆ-98, ಸುಳ್ಯ-93, ಮೂಲ್ಕಿ-91, ಕಡಬ-55, ಹೊರಜಿಲ್ಲೆಯ 437 ಮಂದಿಗೆ ಸೋಂಕು ತಗುಲಿರುವ ಬಗ್ಗೆ ಆರೋಗ್ಯ ಇಲಾಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

195 ಮಂದಿ ಗುಣಮುಖ: ದ.ಕ. ಜಿಲ್ಲೆಯಲ್ಲಿನ ಸೋಂಕಿತರ ಪೈಕಿ ಒಂದೇದಿನ ಅತಿಹೆಚ್ಚು ಸಂಖ್ಯೆಯಲ್ಲಿ (195) ಗುಣಮುಖರಾಗಿದ್ದಾರೆ. ಈ ಮೊದಲು ಆ.7ರಂದು 188 ಮಂದಿ ಗುಣಮುಖರಾಗಿದ್ದರು. ಜಿಲ್ಲೆಯಲ್ಲಿ ಇದುವರೆಗೆ 3,682 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 3,305 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News