ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಮಳೆ: ನದಿಯ ನೀರಿನ ಮಟ್ಟ ಇಳಿಕೆ

Update: 2020-08-09 14:28 GMT

ಉಡುಪಿ, ಆ.9: ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿ ರುವ ಮಳೆ ಇಂದು ಕೂಡ ಮುಂದುವರೆದಿದೆ. ಆದರೆ ಇಂದು ಬೆಳಗ್ಗೆಯಿಂದ ಜಿಲ್ಲೆಯ ಹಲವು ನದಿಗಳ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ನೆರೆ ಕೂಡ ಇಳಿಕೆಯಾಗಿದೆ.

ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಮಳೆಯ ಪ್ರಮಾಣ ಇಳಿಕೆಯಾದರೂ ಉಡುಪಿಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 111.67 ಮಿ.ಮೀ. ಮಳೆಯಾಗಿದ್ದು, ಉಡುಪಿ- 117.0 ಮಿ.ಮೀ., ಕುಂದಾಪುರ- 116.0ಮಿ.ಮೀ., ಕಾರ್ಕಳ- 102.0ಮಿ.ಮೀ. ಮಳೆ ಯಾಗಿರುವ ಬಗ್ಗೆ ವರದಿಯಾಗಿದೆ.

ಬೈಂದೂರು ತಾಲೂಕಿನ ನಾವುಂದ, ಹಡವು ಎಂಬಲ್ಲಿ ನೆರೆಯ ನೀರು ಇಳಿಕೆ ಯಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ. ಇಲ್ಲಿ ಅಗತ್ಯಕ್ಕೆ ಬೇಕಾದ ದೋಣಿ ವ್ಯವಸ್ಥೆಯನ್ನು ಮಾಡಲಾಗಿದೆ. ಸದ್ಯ ಯಾರನ್ನು ಕೂಡ ಸ್ಥಳಾಂತರ ಮಾಡಿಲ್ಲ ಎಂದು ಬೈಂದೂರು ತಹಶೀಲ್ದಾರ್ ಪೂಜಾರ್ ತಿಳಿಸಿದ್ದಾರೆ. ಹಿರಿಯಡ್ಕ ಸಮೀಪದ ಬಜೆ ಡ್ಯಾಂನ ಸ್ವರ್ಣ ನದಿಯಲ್ಲಿ 10.5 ಮೀಟರ್ ನೀರು ಹರಿಯುತ್ತಿದ್ದು, ಆ.8ರಂದು ನದಿಯ ನೀರು ಡ್ಯಾಂನ ಮಟ್ಟಕ್ಕಿಂದ ಐದು ಮೀಟರ್ ಹೆಚ್ಚು ಇತ್ತು. ಆದರೆ ರವಿವಾರ ನೀರಿನ ಮಟ್ಟವು 2.50 ಮೀಟರ್‌ಗೆ ಇಳಿಕೆಯಾಗಿರುವುದು ಕಂಡುಬಂದಿದೆ.

ಉಡುಪಿ ತಾಲೂಕಿನ ಸ್ವರ್ಣ ನದಿಯ ತಪ್ಪಲಿನಲ್ಲಿರುವ ಪೆರಂಪಳ್ಳಿಯ ಕುದ್ರು ವಿನಲ್ಲಿ ನೆರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿ 18 ಮಂದಿಯನ್ನು ಆ.8ರಂದು ರಾತ್ರಿ ವೇಳೆ ಸ್ಥಳಾಂತರಿಸಲಾಗಿತ್ತು. ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದು ಕೊಂಡಿದ್ದ ಇವರೆಲ್ಲ ಇಂದು ನೆರೆ ಇಳಿಮುಖ ಆದ ನಂತರ ವಾಪಾಸ್ಸು ತಮ್ಮ ಮನೆಗೆ ಮರಳಿದ್ದಾರೆ. ಅದೇ ರೀತಿ ಕೆಮ್ಮಣ್ಣು ಕುದ್ರುವಿನಲ್ಲಿಯೂ ನೀರು ನುಗ್ಗಿ ಮನೆಗಳು ಜಲಾವೃಗೊಂಡಿರುವ ಬಗ್ಗೆಯೂ ವರದಿಯಾಗಿದೆ.

ಬ್ರಹ್ಮಾವರ ತಾಲೂಕಿನ ಉಪ್ಪೂರು, ಆರೂರುಗಳಲ್ಲಿಯೂ ನೆರೆ ಇಳಿಮುಖ ಆಗಿದೆ. ನದಿ ನೀರು ಉಕ್ಕಿ ಹರಿದಿರುವುದರಿಂದ ನೀಲಾವರ ಡ್ಯಾಂ ಬೃಹತ್ ಆಕಾರದ ಮರದ ಗೆಲ್ಲು, ಕಸಗಳಿಂದ ತುಂಬಿ ಹೋಗಿದೆ. ಉಪ್ಪೂರು ಹಾಗೂ ಆರೂರು ನೆರೆ ಪೀಡಿತ ಪ್ರದೇಶಗಳಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇವರೊಂದಿಗೆ ಬ್ರಹ್ಮಾವರ ತಹ ಶೀಲ್ದಾರ್ ಕಿರಣ್ ಗೋರಯ್ಯ ಹಾಜರಿದ್ದರು.

ಇಂದು ಮುಂದುವರೆದ ಮಳೆಯಿಂದಾಗಿ ಕೆಲವು ತಗ್ಗು ಪ್ರದೇಶ ಹಾಗೂ ಗದ್ದೆಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯ ಪಡುಬಿದ್ರಿ, ಕುಂದಾಪುರ ಕೋಡಿ, ಉದ್ಯಾವರ ಪಡು ಕೆರೆಯಲ್ಲಿ ಕಡಲ್ಕೊರೆತ ಮುಂದುವರೆ ದಿದೆ. ಕೆಲವು ಕಡೆಗಳಲ್ಲಿ ಭೂ ಪ್ರದೇಶಗಳು ಕೊರೆತದಿಂದ ಸಮುದ್ರಪಾಲಾ ಗಿರುವುದು ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News