ಪ್ರವಾಹ ಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಜ್ಜು: ಜಿಲಾಧಿಕಾರಿ ಜಗದೀಶ್

Update: 2020-08-09 14:31 GMT

ಉಡುಪಿ, ಆ.9: ಜಿಲ್ಲೆಯ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನೆರೆಪೀಡಿತ ಬೈಂದೂರು ತಾಲೂಕಿನ ನಾವುಂದ, ನಾಡಾ ಗ್ರಾಪಂ ವ್ಯಾಪ್ತಿಯ ಹಡವು ಹಾಗೂ ಉಡುಪಿ ತಾಲೂಕಿನ ಉಪ್ಪೂರು ಗ್ರಾಮಗಳಿಗೆ ತೆರಳಿದ ಜಿಲ್ಲಾಧಿಕಾರಿ, ಸ್ಥಳೀಯರ ಅಹವಾಲುಗಳನ್ನು ಆಲಿಸಿದರು. ಪ್ರತಿ ಮಳೆಗಾಲ ದಲ್ಲೂ ನೆರೆ ಉಂಟಾಗಿ ಸಂಪರ್ಕ ಕಡಿದು ಕೊಳ್ಳಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳು ಸಹಿತ ಬೇರೆ ಪ್ರದೇಶಗಳಿಗೆ ಹೋಗುವರಿಗೆ ತುಂಬಾ ತೊಂದರೆಯಾಗು ತ್ತಿದೆ. ಆದುದರಿಂದ ಇಲ್ಲಿಗೆ ಸೇತುವೆ ಮಂಜೂರು ಮಾಡಬೇಕು ಎಂದು ನಾವುಂದ ಕುದ್ರು ಪ್ರದೇಶದ ಗ್ರಾಮಸ್ಥರು ಮನವಿ ಮಾಡಿದರು.

ಬಳಿಕ ನಾವುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರವಾಹ ಸ್ಥಿತಿ ಎದುರಿಸಲು ಹಾಗೂ ಜನರಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ. ಪ್ರಸ್ತುತ ಕುದ್ರು ಇರುವಂತಹ ಪ್ರದೇಶಗಳಲ್ಲಿ ನೆರೆ ಹೆಚ್ಚಿದ್ದು ಅಲ್ಲಿನ ಜನರಿಗೆ ಓಡಾಟಕ್ಕೆ ಅನುಕೂಲವಾಗು ವಂತೆ ಸರಕಾರದಿಂದ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಮಳೆಯಿಂದಾಗಿ ಮನೆ ಹಾನಿ, ಪ್ರಾಣಹಾನಿ ಹಾಗೂ ಜಾನುವಾರು ನಷ್ಟಕ್ಕೆ ತಕ್ಷಣ ಪರಿಹಾರ ನೀಡಲು ಸರಕಾರ ಆದೇಶ ನೀಡಿದ್ದು ಅದರಂತೆಯೇ ಜಿಲ್ಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಪ್ರಾಕೃತಿಕ ವಿಕೋಪ ತುರ್ತು ಪರಿಹಾರ ನಿಧಿ ಖಾತೆ ಯಲ್ಲಿ ಸುಮಾರು 5 ಕೋಟಿ ರೂ. ಇದ್ದು, ಪರಿಹಾರದ ಹಣಕ್ಕೆ ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ಮೊದಲಾದವರು ಉಪಸ್ಥಿತರಿದ್ದರು. ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರಿ, ಸಿಪಿಐ ಸುರೇಶ್ ನಾಯಕ್, ಕಂದಾಯ ನಿರೀಕ್ಷಕ ಇ. ಕುಮಾರ್, ಗ್ರಾಪಂ ನಾವುಂದ ಕಾರ್ಯದರ್ಶಿ ಗಣೇಶ್ ದೇವಾಡಿಗ, ನಾವುಂದ ಗ್ರಾಮಕರಣಿಕ ಹನುಮಂತ ಹಾಗೂ ಸ್ಥಳೀಯರು ಈ ಸಂದರ್ಭ ಇದ್ದರು.

‘ಜಿಲ್ಲೆಯಲ್ಲಿ ಇಂದು ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಎಲ್ಲೂ ಕೂಡ ಪ್ರವಾಹ ಪರಿಸ್ಥಿತಿ ಇಲ್ಲ. ಬೈಂದೂರು ತಾಲೂಕಿನ ನಾವುಂದ, ಮರವಂತೆ ಹಾಗೂ ಉಡುಪಿ ತಾಲೂಕಿನ ಉಪ್ಪೂರು ಗ್ರಾಮಗಳಲ್ಲಿ ನೆರೆ ಉಂಟಾಗಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇವತ್ತು ಎಲ್ಲ ಕಡೆಗಳಲ್ಲಿಯೂ ನೆರೆ ಇಳಿದಿದೆ’

-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News