ಬಸ್ರೂರು ಮೂರುಕೈ ಕೃತಕ ನೆರೆ: ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

Update: 2020-08-09 14:39 GMT

ಕುಂದಾಪುರ, ಆ.9: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದಾಗಿ ಕೃತಕ ನೆರೆ ಸೃಷ್ಠಿಯಾಗಿ ಸಂಚಾರಕ್ಕೆ ತೊಂದರೆಯಾಗುತ್ತಿರುವ ಕುಂದಾಪುರ ಬಸ್ರೂರು ಮೂರುಕೈನಿಂದ ವಿನಾಯಕ-ಕೋಡಿ ಜಂಕ್ಷನ್‌ವರೆಗಿನ ಪ್ರದೇಶವನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ಇಲ್ಲಿನ ಅವ್ಯವಸ್ಥೆಯನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಶನಿವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಚಿವರು, ಇಲ್ಲಿನ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಸೂಚನೆಯಂತೆ ಕುಂದಾಪುರ ಎಸಿ ಕೆ.ರಾಜು, ತಹಶಿಲ್ದಾರ್ ಆನಂದಪ್ಪಸೇರಿದಂತೆ ಸಂಬಂದಪಟ್ಟ ಅಧಿಕಾರಿ ಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ರಾ.ಹೆ. ಗುತ್ತಿಗೆ ಕಂಪೆನಿಯಾದ ನವಯುಗದ ಅಧಿಕಾರಿಗಳು, ಇಲ್ಲಿ ಮಳೆಯ ನೀರು ಹರಿಯಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು.

ಆದರೂ ರವಿವಾರ ಕೂಡ ಕೃತಕ ಕೆರೆಯ ಸಮಸ್ಯೆ ಇಲ್ಲಿ ಮುಂದುವರೆದಿದೆ. ಬೆಳಗ್ಗೆಯಿಂದ ಮಳೆಯಾಗುತ್ತಿರುವುದರಿಂದ ವಿನಾಯಕ ಜಂಕ್ಷನ್ ಬಳಿಯ ಟಿಟಿ ರಸ್ತೆಯ ಎದುರಿನ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಯಾಗುತ್ತಿರುವುದು ಕಂಡುಬಂತು.

ರವಿವಾರ ಸ್ಥಳಕ್ಕೆ ಭೇಟಿದ ಜಿಲ್ಲಾಧಿಕಾರಿ ಜಿ.ಜಗದೀಶ್, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ತಕ್ಷಣ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು, ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News