ಪಾಣೆಮಂಗಳೂರು ಸೇತುವೆಯಿಂದ ಯುವಕರು ನದಿಗೆ ಜಿಗಿಯುವ ವೀಡಿಯೊ ವೈರಲ್

Update: 2020-08-09 15:10 GMT

ಬಂಟ್ವಾಳ, ಆ.9: ಅಪಾಯದ ಮಟ್ಟವನ್ನು ಮೀರಿ ಉಕ್ಕಿ ಹರಿಯುತ್ತಿರುವ ನೇತ್ರಾವತಿ‌ ನದಿಗೆ ಸೇತುವೆ ಮೇಲಿಂದ ಕೆಲವು ಯುವಕರು ಜಿಗಿಯುತ್ತಿ ರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ಟೀಕೆಗೆ ಒಳಗಾಗಿದೆ.

ಶನಿವಾರ ನೇತ್ರಾವತಿ ನದಿಯಲ್ಲಿ 9.3 ಮೀಟರ್ ಮಟ್ಟದಲ್ಲಿ ನೀರು ಹರಿದಿದ್ದು, ಈ ಸಂದರ್ಭದಲ್ಲಿ ಪಾಣೆಮಂಗಳೂರು ನೇತ್ರಾವತಿ ಹಳೆ ಸೇತುವೆಯ ಮೇಲಿನಿಂದ ಕೆಲವು ಯುವಕರು ನದಿಗೆ ಜಿಗಿಯುವ ಮೂಲಕ ದುಸ್ಸಾಹಸವನ್ನು ಪ್ರದರ್ಶಿಸಿದ್ದಾರೆ.

ಕಳೆದ ವರ್ಷ ಕೂಡಾ ಇದೇ ರೀತಿ ಪ್ರವಾಹದ ಸಂದರ್ಭದಲ್ಲಿ ಯುವಕರು ನದಿಗೆ ಜಿಗಿಯುವ ವೀಡಿಯೊ ವೈರಲ್ ಆಗಿತ್ತು. ‘ಈ ರೀತಿಯ ದುಸ್ಸಾಹಸದಿಂದ ಯಾವುದಾದರೂ ಅನಾಹುತ ಸಂಭವಿಸಿದರೆ‌ ಯಾರು ಹೊಣೆ?’ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಪಾಣೆಮಂಗಳೂರು, ಗೂಡಿನಬಳಿ‌ ಪ್ರದೇಶದಲ್ಲಿ ಇರುವ ಕೆಲವು ಅನುಭವಿ ಈಜುಗಾರರು ಈ ರೀತಿ‌ ಸೇತುವೆಯಿಂದ ನದಿಗೆ ಜಿಗಿದಿದ್ದಾರೆ ಎನ್ನಲಾಗಿದೆ. ಆದರೆ ಇವರನ್ನು ನೋಡಿ ಉತ್ಸಾಹಕ್ಕೆ ಒಳಗಾಗುವ ಅರೆ ಬರೆ ಈಜುವವರು ನದಿಗೆ ಜಿಗಿದರೆ ಆಗುವ ದುರಂತಕ್ಕೆ ಯಾರು ಹೊಣೆಗಾರರು ಎಂಬ ಪ್ರಶ್ನೆ‌ ಸಾರ್ವಜನಿಕರದ್ದು.

ಈ ರೀತಿಯ ದುಸ್ಸಾಹಸಕ್ಕೆ ಪೊಲೀಸ್ ಇಲಾಖೆ, ತಾಲೂಕು ಆಡಳಿತ ಕಡಿವಾಣ ಹಾಕಬೇಕು. ಊರಿನ ಸಂಘ ಸಂಸ್ಥೆಗಳ ಪ್ರಮುಖರು ಈ ಬಗ್ಗೆ ಯುವಕರನ್ನು ಎಚ್ಚರಿಸಬೇಕು‌ ಎಂಬ ಆಗ್ರಹ ಕೇಳಿ ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News