ಕೋಟ: ಚಿತ್ರಪಾಡಿ, ಬನ್ನಾಡಿಗಳಲ್ಲಿ ನೆರೆ ಭೀತಿ

Update: 2020-08-09 15:27 GMT

ಉಡುಪಿ, ಆ.9: ರವಿವಾರ ಅಪರಾಹ್ನದ ಬಳಿಕ ಜಿಲ್ಲೆಯ ಕೆಲವು ಕಡೆಗಳಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೋಟ ಹೋಬಳಿಯ ಚಿತ್ರಪಾಡಿ ಹಾಗೂ ಬನ್ನಾಡಿ ಗ್ರಾಮಗಳಲ್ಲಿ ನೆರೆಯ ಭೀತಿ ಮತ್ತೆ ತಲೆದೋರಿದ್ದು, 10ರಿಂದ 15 ಮನೆಗಳಿಗೆ ಅಪಾಯವಾಗುವ ಸಂಭವವಿದೆ.

ಇಲ್ಲಿನ ಎಲ್ಲಾ ಮನೆಯವರಿಗೆ ಸೂಚನೆಗಳನ್ನು ನೀಡಿದ್ದು ದೋಣಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ಹಾಗೂ ಕೋಟ ಆರ್‌ಐ ರಾಜು ತಿಳಿಸಿದ್ದಾರೆ.

ಚಿತ್ರಪಾಡಿ ಗ್ರಾಮದ ಬೆಟ್ಲಕ್ಕಿ, ಮಂಡಾಜೆಡ್ಡು, ಹೊಳೆಕೆರೆ ಭಾಗದ 7-8 ಮನೆಗಳು ಹಾಗೂ ಬನ್ನಾಡಿ ಗ್ರಾಮದ 5-6 ಮನೆಗಳು ನೆರೆಯ ಭೀತಿಯಲ್ಲಿವೆ. ಇಲ್ಲಿ ಹರಿಯುವ ಹಿರೇಹೊಳೆಗೆ ವಾರಾಹಿಯ ನೀರು ಸೇರುತಿದ್ದು, ಇದರಿಂದ ಇಲ್ಲಿನ ಗದ್ದೆ-ಬಯಲುಗಳೆಲ್ಲಾ ನೀರು ತುಂಬಿದ್ದು, ಮನೆಗಳು ಜಲಾವೃತ ಗೊಂಡಿವೆ.

ಈ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಕೋಟ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಕರಣಿಕರು ಈ ಎಲ್ಲಾ ಮನೆಗಳಿಗೆ ದೂರವಾಣಿ ನಂಬರ್‌ಗಳನ್ನು ನೀಡಿ, ದೋಣಿ ವ್ಯವಸ್ಥೆ ಮಾಡಿದ್ದು, ನೆರೆ ನೀರು ಹೆಚ್ಚಾದರೆ ಕರೆ ಮಾಡುವಂತೆ ತಿಳಿಸಿರುವುದಾಗಿ ರಾಜು ನುಡಿದರು.

ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಮಾವಿನಕುದ್ರು ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಕುಂದಾಪುರ ಸಹಾಯಕ ಕಮಿಷನರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮನೆಗಳಿಗೆ ಹಾನಿ: ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಗದ್ದೆಮನೆ ಎಂಬಲ್ಲಿ ಇಂದು ಶಿವರಾಮ ಎಂಬವರ ಪಕ್ಕಾಮನೆ ಮಳೆಯಿಂದಾಗಿ ಸಂಪೂರ್ಣ ಹಾನಿಗೊಳಗಾಗಿದ್ದು, ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.ಐರೋಡಿ ಗ್ರಾಮದ ಅಲ್ಸೆಬೆಟ್ಟುನ ಬೇಬಿ ಮಡಿವಾಳ್ತಿ ಅವರ ಮನೆಯೂ ಇಂದು ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು 10,000ರೂ. ನಷ್ಟವಾಗಿದೆ.

ನಡೂರು ಗ್ರಾಮದ ಸಂಜೀವ ಕೊರಗ ಎಂಬವರ ಮನೆಯ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಗುಂಡ್ಮಿ ಗ್ರಾಮದ ಇಂದಿರಾನಗರದಲ್ಲಿ ಗೋವಿಂದ ಎಂಬವರ ವಾಸದ ಪಕ್ಕಾಮನೆಯ ಗೋಡೆ ಗಾಳಿ-ಮಳೆಗೆ ಭಾಗಶ: ಬಿದ್ದು ಹೋಗಿದ್ದು ಅಂದಾಜು 30 ಸಾವಿರ ರೂ.ನಷ್ಟ ವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News