ನೆರೆಗೆ ಸಿಕ್ಕ ಅದಮಾರು ಮಠದ ಹಸುಗಳ ರಕ್ಷಣೆ
Update: 2020-08-09 20:59 IST
ಉಡುಪಿ, ಆ.9: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ನದಿ, ಕೆರೆಗಳೆಲ್ಲಾ ತುಂಬಿ ಹರಿಯುತಿದ್ದು, ನೀರು ಆಸುಪಾಸಿನ ಮನೆ, ತೋಟಗಳಿಗೆ ನುಗ್ಗಿ ಜನರು ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸ ಲಾಗುತ್ತಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಉದ್ಯಾವರದ ಪಾಪನಾಶಿನಿ ಹೊಳೆ ತುಂಬಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಇದರಿಂದ ಮಠದ ಕುದ್ರು ವಿನಲ್ಲಿರುವ ಮನೆಗಳೊಂದಿಗೆ, 21 ಹಸುಗಳು ಅಪಾಯಕ್ಕೆ ಸಿಲುಕಿದ್ದವು. ಪರ್ಯಾಯ ಅದಮಾರು ಮಠಕ್ಕೆ ಸೇರಿದ ಈ ಹಸುಗಳನ್ನು ಇಂದು ಅಲ್ಲಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ಈ ಹಸುಗಳು ಉದ್ಯಾವರ ಗ್ರಾಮದ ವಿಭುದೇಶ ನಗರ ವ್ಯಾಪ್ತಿಯಲ್ಲಿದ್ದ ಅದಮಾರು ಮಠದ ಜಮೀನಿನಲ್ಲಿದ್ದು ಮಠದ ಸಿಬ್ಬಂದಿಗಳು ಮುಂಜಾ ಗ್ರತಾ ಕ್ರಮವಾಗಿ ಇವುಗಳನ್ನು ಅಲ್ಲಿಂದ ಸ್ಥಳಾಂತರಿಸಿದರು. ಟೆಂಪೊಗಳ ಮೂಲಕ ಇವುಗಳನ್ನು ಉಡುಪಿಗೆ ಕರೆತರಲಾಗಿದೆ ಎಂದು ಮಠದ ಮ್ಯಾನೇಜರ್ ಗೋವಿಂದರಾಜ್ ತಿಳಿಸಿದ್ದಾರೆ.