‘ಶ್ರೀರಾಮನ ಜನ್ಮಸ್ಥಳ ನೇಪಾಳ’: ಮತ್ತೆ ವಿವಾದದ ಕಿಡಿ ಹೊತ್ತಿಸಿದ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ

Update: 2020-08-09 15:52 GMT

ಹೊಸದಿಲ್ಲಿ, ಆ. 9: ಶ್ರೀರಾಮ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಜನಿಸಿಲ್ಲ. ಬದಲಾಗಿ ದಕ್ಷಿಣ ನೇಪಾಳದ ಅಯೋಧ್ಯೆಪುರಿಯಲ್ಲಿ ಜನಿಸಿದ್ದಾನೆ ಎಂಬುದು ತನಗೆ ಮನವರಿಕೆಯಾಗಿದೆ ಎಂದು ತನ್ನನ್ನು ಭೇಟಿಯಾದ ನಿಯೋಗಕ್ಕೆ ತಿಳಿಸುವ ಮೂಲಕ ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಈ ವಾರ ಕೂಡ ಶ್ರೀರಾಮನ ಕುರಿತು ವಿವಾದದ ಕಿಡಿ ಹೊತ್ತಿಸಲು ಪ್ರಯತ್ನಿಸಿದ್ದಾರೆ.

ನೇಪಾಳದ ಆಡಳಿತಾರೂಢ ನೇಪಾಳ ಕಮ್ಯೂನಿಸ್ಟ್ ಪಕ್ಷದೊಳಗಿನ ತೀವ್ರವಾದ ಅಧಿಕಾರದ ಕಿತ್ತಾಟದಿಂದ ಪಕ್ಷ ವಿಭಜನೆಯತ್ತ ಸಾಗುತ್ತಿರುವ ನಡುವೆ ಪ್ರಧಾನಿ ಒಲಿ ಅವರು ಈ ತಿಂಗಳು ಎರಡನೇ ಬಾರಿ ಅಯೋಧ್ಯೆ ಕುರಿತು ಹೇಳಿಕೆ ನೀಡಿದ್ದಾರೆ. ಪಕ್ಷದ ಉಪಾಧ್ಯಕ್ಷ ಪುಷ್ಪ ಕಮಾಲ್ ಧಹಾಲ್ ಹಾಗೂ ಇತರ ಇಬ್ಬರು ಮಾಜಿ ಸಂಸದರಾದ ಮಾಧವ್ ನೇಪಾಳ್ ಹಾಗೂ ಝಲಾಂಥ ಖನಲ್ ನೇತೃತ್ವದ ಭಿನ್ನಮತೀಯರ ಆಗ್ರಹಕ್ಕೆ ಮಣಿದು ತಾನು ಅಧಿಕಾರದಿಂದ ಕೆಳಗೆ ಇಳಿಯಲಾರೆ ಎಂದು ಪ್ರಧಾನ ಒಲಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಪಕ್ಷದ ಒಳಗೆ ಭಿನ್ನಮತೀಯರು ಬಹುಮತ ಹೊಂದಿದ್ದರೂ ಭಾರತದೊಂದಿಗೆ ಸಂಘರ್ಷಕ್ಕೆ ಇಳಿದಿರುವ ಪ್ರಧಾನಿ ಒಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಅವರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಒಲಿ ಅವರು ನೇಪಾಳದ ಹೊಸ ನಕಾಶೆಯನ್ನು ರೂಪಿಸಿರುವುದು ಚೀನಾ ಕಮ್ಯೂನಿಸ್ಟ್ ಪಕ್ಷಕ್ಕೆ ತಾನು ಹತ್ತಿರವಾಗಿದ್ದೇನೆ ಎಂದು ತಿಳಿಸುವ ಪ್ರಯತ್ನವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಒಲಿ ಅವರು ಕಳೆದ ತಿಂಗಳು ರಾಮ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಜನಿಸಿಲ್ಲ. ಬದಲಾಗಿ ದಕ್ಷಿಣ ನೇಪಾಳದ ಅಯೋಧ್ಯೆಪುರಿಯಲ್ಲಿ ಜನಿಸಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಪ್ರಧಾನಿ ಅವರ ಈ ಹೇಳಿಕೆಯನ್ನು ಅವರ ಪಕ್ಷ ಹಾಸ್ಯಾಸ್ಪದ ಎಂದಿತ್ತು. ಪ್ರಧಾನಿ ಒಲಿ ಅವರ ಹೇಳಿಕೆ ಬಗ್ಗೆ ಕಠ್ಮಂಡುವಿನಲ್ಲಿ ತತ್‌ಕ್ಷಣ ಸ್ಪಷ್ಟನೆ ನೀಡಿದ ನೇಪಾಳದ ವಿದೇಶಾಂಗ ಸಚಿವಾಲಯ, ರಾಮಾಯಣ ಪ್ರತಿನಿಧಿಸುವ ಸಾಂಸ್ಕೃತಿಕ ಭೌಗೋಳಿಕತೆಯ ಸಂಶೋಧನೆ ಹಾಗೂ ಮುಂದಿನ ಅಧ್ಯಯನದ ಪ್ರಾಮುಖ್ಯತೆ ಬಗ್ಗೆ ಗಮನ ಕೇಂದ್ರೀಕರಿಸುವ ಅರ್ಥದಲ್ಲಿ ಪ್ರಧಾನಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದಿತ್ತು. ಇದರಿಂದ ಭಾರತ ಈ ಹೇಳಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿರಲಿಲ್ಲ.

ಶ್ರೀರಾಮ ಜನ್ಮ ಸ್ಥಳದ ಬಗ್ಗೆ ನೆನಪಿಸಲು ಪ್ರಧಾನಿ ಅವರು ಶನಿವಾರ ಮತ್ತೆ ಶ್ರಮಿಸಿದ್ದಾರೆ. ನ್ಯಾಷನಲ್ ಕಮ್ಯೂನಿಸ್ಟ್ ಪಕ್ಷದ ಸಭೆಗೆ ಕಳೆದ ಒಂದು ವಾರದಿಂದ ಗೈರಾಗುತ್ತಿರುವ ಪ್ರಧಾನಿ ಅವರು ತನ್ನನ್ನು ಭೇಟಿಯಾದ ಛಿತ್ವಾನ್ ಜಿಲ್ಲೆಯ ಮಾಡಿಯ ನಿಯೋಗದೊಂದಿಗೆ ಶ್ರೀರಾಮ ಜನ್ಮ ಸ್ಥಳದ ಬಗೆಗಿನ ತನ್ನ ಯೋಜನೆ ಬಗ್ಗೆ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಬೇಕು ಹಾಗೂ ಶ್ರೀರಾಮನ ಜನ್ಮ ಸ್ಥಳವಾಗಿರುವ ಅಯೋಧ್ಯೆಪುರಿಯನ್ನು ಪ್ರಚಾರ ಮಾಡಬೇಕು ಎಂದು ಮಾಡಿ ಮೇಯರ್ ಠಾಕೂರ್ ಪ್ರಸಾದ್ ಧಾಕಲ್ ನೇತೃತ್ವದ ನಿಯೋಗಕ್ಕೆ ಅವರು ತಿಳಿಸಿದ್ದಾರೆ.

ಶ್ರೀರಾಮನ ಜನ್ಮಸ್ಥಳ ನೇಪಾಳ ಎಂದು ಪ್ರಚಾರ ಮಾಡುವ ಪ್ರಧಾನಿ ಒಲಿ ಅವರ ನಿರಂತರ ಪ್ರಯತ್ನದ ಬಗ್ಗೆ ಜಾನಕಿ ದೇವಾಲಯದ ಅರ್ಚಕ ಸೇರಿದಂತೆ ನೇಪಾಳದ ಹಲವು ಧಾರ್ಮಿಕ ನಾಯಕರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಒಲಿ ಅವರ ಪ್ರತಿಪಾದನೆಯನ್ನು ಟೀಕಿಸಿರುವ ಅಯೋಧ್ಯೆ ಭೂಮಿ ಪೂಜೆಯಲ್ಲಿ ಪಾಲ್ಗೊಂಡ ನೇಪಾಳದ ಅರ್ಚಕ ಆರ್ಚಾಯ ದುರ್ಗಾ ಪ್ರಸಾದ್ ಗೌತಮ್, ಪ್ರಧಾನಿ ಒಲಿ ಅವರ ಪ್ರತಿಪಾದನೆ ಅಸಂಬದ್ಧ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News