ಹಿರಿಯ ಪತ್ರಕರ್ತ ನಾರಾಯಣ ಅಮ್ಮುಂಜೆ ನಿಧನ

Update: 2020-08-09 17:12 GMT

ಪುತ್ತೂರು: ತಾಲೂಕು ಪತ್ರಕರ್ತರ ಸಂಘದ ಮಾಜಿ ಕಾರ್ಯದರ್ಶಿ, ಹಾಲಿ ಸದಸ್ಯ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಅಮ್ಮುಂಜೆ ನಿವಾಸಿ ನಾರಾಯಣ ನಾಯ್ಕ ಅಮ್ಮುಂಜೆ(48) ಹೃದಯಾಘಾತದಿಂದ ಶನಿವಾರ ರಾತ್ರಿ ಮಂಗಳೂರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಶನಿವಾರ ಬೆಳಗ್ಗೆ ಮನೆಯಲ್ಲಿದ್ದ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ರಾತ್ರಿ ವೇಳೆ ಕೊನೆಯುಸಿರೆಳೆದಿದ್ದಾರೆ.

ಕಳೆದ ಸುಮಾರು 23 ವರ್ಷಗಳಿಂದ ಸ್ಥಳೀಯ ಸುದ್ದಿಬಿಡುಗಡೆ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಅವರು ಗ್ರಾಮೀಣ ವರದಿ ಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದ ಅವರು ಮರಾಟಿ ಸೇವಾ ಸಮಾಜ ಸೇರಿದಂತೆ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪ್ರಚಾರ ಸಮಿತಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ದರ್ಬೆ ಲಿಟ್ಲ್ ಫ್ರವರ್ ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 

ಮೃತರು ಪತ್ನಿ ಆರ್ಯಾಪು ಗ್ರಾಪಂ ಮಾಜಿ ಸದಸ್ಯೆ ಪೂರ್ಣಿಮಾ ಮತ್ತು ಪುತ್ರ ಪ್ರಜ್ವಲ್ ಅವರನ್ನು ಅಗಲಿದ್ದಾರೆ. 

ಸಂತಾಪ

ಪತ್ರಕರ್ತ ನಾರಾಯಣ ಅಮ್ಮುಂಜ ಅವರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸಹಿತ ಹಲವು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಪತ್ರಕರ್ತರ ಸಂಘ ಸಂತಾಪ

ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಹಿರಿಯ ಸದಸ್ಯರಾಗಿದ್ದ ನಾರಾಯಣ ಅಮ್ಮುಂಜೆ ಅವರ ನಿಧನಕ್ಕೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News