ಬೈರೂತ್: ಸ್ಫೋಟ ಘಟನೆ ವಿರುದ್ಧ ಬೃಹತ್ ಪ್ರತಿಭಟನೆ

Update: 2020-08-09 17:17 GMT

ಬೈರೂತ್ (ಲೆಬನಾನ್), ಆ. 9: ಇತ್ತೀಚೆಗೆ ಲೆಬನಾನ್ ರಾಜಧಾನಿ ಬೈರೂತ್ ‌ನಲ್ಲಿ ನಡೆದಿರುವ ಭೀಕರ ಸ್ಫೋಟದ ಬಗ್ಗೆ ಆಕ್ರೋಶಗೊಂಡಿರುವ ಜನರು ಶನಿವಾರ ಬೈರೂತ್‌ನಲ್ಲಿ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ಸರಕಾರದ ಸಚಿವಾಲಯಗಳಿಗೆ ನುಗ್ಗಿದರು, ಕೆಲವು ಕಟ್ಟಡಗಳಿಗೆ ಬೆಂಕಿ ಕೊಟ್ಟರು ಹಾಗೂ ಭದ್ರತಾ ಪಡೆಗಳೊಂದಿಗೆ ಹೊಯ್‌ಕೈ ನಡೆಸಿದರು.

ಪ್ರತಿಭಟನೆ ತಾರಕಕ್ಕೇರುತ್ತಿರುವಂತೆಯೇ, ದೇಶದ ಪ್ರಧಾನಿ ಹಸನ್ ದಿಯಾಬ್ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಅವರು ಮಧ್ಯಂತರ ಚುನಾವಣೆಯನ್ನು ನಡೆಸುವ ಕೊಡುಗೆಯನ್ನು ನೀಡಿದರು ಹಾಗೂ ಇದಕ್ಕಾಗಿ ದೇಶದ ವಿವಿಧ ರಾಜಕೀಯ ಬಣಗಳ ಒಪ್ಪಿಗೆ ಪಡೆಯಲು ತನಗೆ ಎರಡು ತಿಂಗಳುಗಳ ಕಾಲಾವಕಾಶ ಬೇಕು ಎಂದರು.

ಆದರೆ, ದಶಕಗಳ ಹಳೆಯ ಆಡಳಿತ ವ್ಯವಸ್ಥೆಯು ಸರಕಾರದ ನಿಷ್ಕ್ರಿಯತೆಗೆ ಕಾರಣವಾಗಿದೆ ಹಾಗೂ ಇದೇ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಮಧ್ಯಂತರ ಚುನಾವಣೆ ನಡೆಸಲು ರಾಜಕಾರಣಿಗಳು ಒಪ್ಪುವುದು ಬೇಡ ಎಂದು ಪ್ರತಿಭಟನಕಾರರು ಹೇಳಿದರು. ಬಂದರಿನ ಉಗ್ರಾಣದಲ್ಲಿ 6 ವರ್ಷಗಳಿಗೂ ಹೆಚ್ಚು ಕಾಲ ಬೃಹತ್ ಪ್ರಮಾಣದ ಸ್ಫೋಟಕಗಳನ್ನು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ದಾಸ್ತಾನಿಟ್ಟಿರುವುದಕ್ಕೆ ಇದೇ ಸರಕಾರಿ ನಿಷ್ಕ್ರಿಯತೆ ಕಾರಣ ಎಂದು ಅವರು ಆರೋಪಿಸಿದರು.

ಬೈರೂತ್ ಬಂದರಿನ ಉಗ್ರಾಣದಲ್ಲಿದ್ದ ಸುಮಾರು 2,700 ಟನ್ (ಒಂದು ಟನ್ ಅಂದರೆ 1,000 ಕಿಲೋಗ್ರಾಂ) ಅಮೋನಿಯಂ ನೈಟ್ರೇಟ್ ರಾಸಾಯನಿಕವು ಮಂಗಳವಾರ ಸ್ಫೋಟಿಸಿದೆ.

ಮಂಗಳವಾರ ನಡೆದ ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ ಅದು 193 ಕಿಲೋಮೀಟರ್ ದೂರದ ಸೈಪ್ರಸ್ ದ್ವೀಪದಲ್ಲೂ ಪ್ರತಿಧ್ವನಿಸಿತ್ತು. ಸ್ಫೋಟದಲ್ಲಿ ಈವರೆಗೆ ಕನಿಷ್ಠ 158 ಮಂದಿ ಮೃತಪಟ್ಟಿದ್ದಾರೆ.

ಲೆಬನಾನ್‌ನಲ್ಲಿ ಅಧಿಕಾರದಲ್ಲಿರುವ ರಾಜಕಾರಣಿಗಳು ಕೆಳಗಿಳಿದು, ಹೊಸ ಆಡಳಿತ ವ್ಯವಸ್ಥೆಯೊಂದಕ್ಕೆ ದಾರಿ ಮಾಡಿಕೊಡಬೇಕು ಎನ್ನುವುದು ಪ್ರತಿಭಟನಕಾರರ ಆಗ್ರಹವಾಗಿದೆ.

‘ರಾಜೀನಾಮೆ ನೀಡಿ, ಇಲ್ಲವೇ ನೇಣು ಬಿಗಿದುಕೊಳ್ಳಿ’ ಎಂಬುದಾಗಿ ಬರೆದಿರುವ ಫಲಕಗಳನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.

‘‘ಇನ್ನು ಮುಂದೆ ಅವರ ಆಡಳಿತದಡಿ ಬದುಕಲು ಜನರು ನಿರಾಕರಿಸಿದ್ದಾರೆ’’ ಎಂದು ಶನಿವಾರದ ಪ್ರತಿಭಟನೆಯನ್ನು ಸಂಘಟಿಸಿರುವ ಗುಂಪುಗಳ ಪೈಕಿ ಒಂದಾಗಿರುವ ‘ಮಿನ್ ತಿಶ್ರೀನ್’ನ ಹುಸೈನ್ ಅಲ್ ಅಚಿ ಹೇಳಿದರು.

ಲೆಬನಾನ್ ವಾರ್ತಾ ಸಚಿವೆ ರಾಜೀನಾಮೆ

ಕಳೆದ ವಾರ ಬೈರೂತ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಸಂಬಂಧಿಸಿ ಲೆಬನಾನ್‌ನ ವಾರ್ತಾ ಸಚಿವೆ ಮನಾಲ್ ಅಬ್ದುಲ್ ಸಮದ್ ರವಿವಾರ ರಾಜೀನಾಮೆ ನೀಡಿದ್ದಾರೆ. ‘‘ಭೀಕರ ಬೈರೂತ್ ದುರಂತದ ಹಿನ್ನೆಲೆಯಲ್ಲಿ, ನಾನು ಸರಕಾರಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’’ ಎಂದು ಸ್ಥಳೀಯ ಮಾಧ್ಯಮಕ್ಕೆ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ಅವರು ತಿಳಿಸಿದ್ದಾರೆ. ಲೆಬನಾನ್ ಜನರ ಹಿತ ಕಾಯುವಲ್ಲಿ ವಿಫಲವಾಗಿರುವುದಕ್ಕಾಗಿ ಅವರು ಜನರ ಕ್ಷಮೆ ಕೋರಿದ್ದಾರೆ.

ಸ್ಫೋಟದ ಹಿನ್ನೆಲೆಯಲ್ಲಿ, ಇದಕ್ಕೂ ಒಂದು ದಿನದ ಹಿಂದೆ ಹಲವಾರು ಸಂಸದರು ರಾಜೀನಾಮೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News