ಶ್ರೀಲಂಕಾ ನೂತನ ಪ್ರಧಾನಿಯಾಗಿ ಮಹಿಂದ ರಾಜಪಕ್ಸ ಪ್ರಮಾಣವಚನ

Update: 2020-08-09 17:27 GMT

ಕೊಲಂಬೊ (ಶ್ರೀಲಂಕಾ), ಆ. 9: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದಿರುವ ಸಂಸದೀಯ ಚುನಾವಣೆಯಲ್ಲಿ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್‌ಎಲ್‌ಪಿಪಿ) ಭರ್ಜರಿ ಬಹುಮತವನ್ನು ಪಡೆದ ಬಳಿಕ, ಪಕ್ಷದ ನಾಯಕ ಹಾಗೂ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ರವಿವಾರ ಬೌದ್ಧ ದೇವಾಲಯವೊಂದರಲ್ಲಿ ನೂತನ ಪ್ರಧಾನಿಯಾಗಿ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದ್ದಾರೆ.

74 ವರ್ಷದ ರಾಜಪಕ್ಸಗೆ ಅವರ ತಮ್ಮ ಹಾಗೂ ದೇಶದ ಅಧ್ಯಕ್ಷ ಗೋತಬಯ ರಾಜಪಕ್ಸ ಉತ್ತರ ಕೊಲಂಬೊದ ಕೆಲನಿಯದಲ್ಲಿರುವ ರಾಜಮಹಾ ವಿಹಾರಾಯ ಎಂಬ ಬೌದ್ಧ ದೇಗುಲದಲ್ಲಿ ಪ್ರಮಾಣವಚನ ಬೋಧಿಸಿದರು.

ಮಹಿಂದ ರಾಜಪಕ್ಸ ಈ ವರ್ಷದ ಜುಲೈ ತಿಂಗಳಲ್ಲಿ 50 ವರ್ಷಗಳ ಸಂಸದೀಯ ರಾಜಕೀಯವನ್ನು ಪೂರ್ಣಗೊಳಿಸಿದ್ದಾರೆ. ಅವರು 1970ರಲ್ಲಿ ತನ್ನ 24ನೇ ವರ್ಷ ಪ್ರಾಯದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿದ್ದರು. ಬಳಿಕ ಅವರು ಎರಡು ಬಾರಿ ದೇಶದ ಅಧ್ಯಕ್ಷರಾಗಿ ಹಾಗೂ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಆಗಸ್ಟ್ 5ರಂದು ನಡೆದ ಸಂಸದೀಯ ಚುನಾವಣೆಯಲ್ಲಿ ಅವರ ಪಕ್ಷ ಎಸ್‌ಎಲ್‌ಪಿಪಿ 225 ಸದಸ್ಯ ಬಲದ ಸಂಸತ್ತಿನಲ್ಲಿ 145 ಸ್ಥಾನಗಳನ್ನು ಗಳಿಸಿದೆ. ಅದರ ಮಿತ್ರಪಕ್ಷಗಳ ಸ್ಥಾನಗಳು ಸೇರಿದರೆ ಮಿತ್ರಕೂಟ ಗಳಿಸಿದ ಸ್ಥಾನಗಳ ಸಂಖ್ಯೆ 150ಕ್ಕೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News