​ಕೋಟೆಪುರ: ಕಡಲ್ಕೊರೆತ ತಡೆಗೆ ಸೂಕ್ತ ತಡೆಗೋಡೆ ಇಲ್ಲ

Update: 2020-08-09 17:38 GMT

ಉಳ್ಳಾಲ, ಆ.9: ಇಲ್ಲಿನ ನಗರಸಭಾ ವ್ಯಾಪ್ತಿಯ ಕೋಟೆಪುರದಲ್ಲಿ ಬಹಳಷ್ಟು ಉದ್ಯಮಗಳು ನೆಲೆಗೊಂಡಿದ್ದರೂ ಇಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಂಬಂಧಪಟ್ಟ ಇಲಾಖೆ ನಿರ್ಲಕ್ಷ ವಹಿಸಿದೆ ಎಂಬ ಆರೋಪ ಕೇಳಿಬಂದಿದೆ. ಕಡಲ ತೀರದ ಪ್ರದೇಶವಾಗಿರುವ ಇಲ್ಲಿ ಸೂಕ್ತ ತಡೆಗೋಡೆ ಇಲ್ಲದ ಕಾರಣದಿಂದ ಸಮುದ್ರದ ಅಬ್ಬರದ ಅಲೆ ರಸ್ತೆಗೆ ಅಪ್ಪಳಿಸುತ್ತಿವೆ. ಇದರಿಂದ ಜನರು ಭೀತಿಯಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ಇಲ್ಲಿದೆ.

ಇಲ್ಲಿ ಸುಮಾರು 35 ವರ್ಷಗಳಿಂದ ಮೀನಿನ ಎಣ್ಣೆ ಉತ್ಪಾದಿಸುವ ಫಿಶ್‌ಮೀಲ್ ಆ್ಯಂಡ್ ಆಯಿಲ್ ಮ್ಯಾನುಫ್ಯಾಕ್ಚರ್ಸ್‌ ಅಸೋಸಿಯೇಶನ್ ಕಾರ್ಯಾಚರಿಸುತ್ತಿದೆ. ಈ ಪ್ರದೇಶದಲ್ಲಿ ಇದರ ಒಟ್ಟು 13 ಘಟಕಗಳಿವೆ. ಇವುಗಳಲ್ಲಿ ದುಡಿಯುವ ಕಾರ್ಮಿಕರ ಸಂಖ್ಯೆಯೂ ಬಹಳಷ್ಟಿದೆ. ಆದರೆ ಈ ಪ್ರದೇಶದಲ್ಲಿ ಕಡಲಿನಬ್ಬರದಿಂದಾಗಿ ಕಾರ್ಮಿಕರು ದಿನನಿತ್ಯ ಭೀತಿಯಿಂದ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಸಮುದ್ರದ ದೈತ್ಯ ಅಲೆಗೆ ತ್ಯಾಜ್ಯವನ್ನೆಲ್ಲ ತೀರದ ಇಲ್ಲಿನ ರಸ್ತೆಗೆ ಸೇರಿಸುತ್ತಿವೆ. ಇದರಿಂದ ಇಲ್ಲಿ ರಸ್ತೆ ಇದ್ದರೂ ಅದು ಸಂಚಾರಕ್ಕೆ ಅನಾನುಕೂಲಕರವಾಗಿದೆ. ಬಂದರ್ ಇಲಾಖೆಗೆ ಸೇರಿದ ಕೋಟೆಪುರ ಲಾಂಚಿ ಜೆಟ್ಟಿ ಪ್ರದೇಶವನ್ನು ವಿವಿಧ ವ್ಯವಹಾರಕ್ಕೆ, ಕಾರ್ಖಾನೆಗೆ ಒದಗಿಸಿಕೊಟ್ಟರೂ ಇಲ್ಲಿನ ಸಮಸ್ಯೆ ಗಳಿಗೆ ಪರಿಹಾರ ಕಲ್ಪಿಸುವ ಗೋಜಿಗೆ ಇಲಾಖೆ ಮುಂದಾಗದ ಕಾರಣದಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಸಮುದ್ರದ ತೀರದಲ್ಲಿರುವ ಈ ರಸ್ತೆಯಲ್ಲಿ ಕಡಲಿನಬ್ಬರ ತೀವ್ರಗೊಂಡ ಸಂದರ್ಭ ಸಂಚಾರ ಕಷ್ಟಕರವಾಗಿರುತ್ತದೆ. ಸಮುದ್ರದ ಅಲೆಗಳ ಅಬ್ಬರಕ್ಕೆ ರಸ್ತೆ ಸೇರುವ ಕೊಳಚೆ ವಸ್ತುಗಳನ್ನು ತೆರವುಗೊಳಿಸಿ ಅದಕ್ಕೊಂದು ವ್ಯವಸ್ಥೆ ಕಲ್ಪಿಸಿಲ್ಲ. ಒಟ್ಟಾರೆಯಾಗಿ ಈ ಪ್ರದೇಶಕ್ಕೆ ಯಾವುದೇ ಸವಲತ್ತು ಗಳನ್ನು ಸಂಬಂಧಪಟ್ಟ ಇಲಾಖೆ ಕಲ್ಪಿಸದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪ ಸಾರ್ವಜನಿಕರದ್ದು.

ಉದ್ಯಮ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಈ ಜಾಗವನ್ನು ಬಂದರ್ ಇಲಾಖೆಯಿಂದ ಫಿಶ್‌ಮೀಲ್ ಆ್ಯಂಡ್ ಆಯಿಲ್ ಮ್ಯಾನುಫ್ಯಾಕ್ಚರ್ಸ್‌ ಅಸೋಸಿಯೇಶನ್ 30 ವರ್ಷಗಳ ಲೀಸ್‌ಗೆ 2008ರಲ್ಲಿ ಒಪ್ಪಂದದ ಮೂಲಕ ಪಡೆದುಕೊಂಡಿತ್ತು. ಆ ಬಳಿಕ ಬಂದರ್ ಇಲಾಖೆ ಈ ಕಡೆ ಮುಖ ಮಾಡಿಲ್ಲ. ಇಲ್ಲಿನ ನೂರಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರೂ ಯಾವುದೇ ಪರಿಹಾರ ವ್ಯವಸ್ಥೆ ಕೈಗೊಂಡಿಲ್ಲ. ಇಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಉಳ್ಳಾಲ ನಗರ ವ್ಯಾಪ್ತಿಯ ಅಧಿಕಾರಿಗಳು ಬಂದರ್ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಇಲ್ಲಿ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಸಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೋಟೆಪುರದಲ್ಲಿ ಕಡಲಿನಬ್ಬರ ತಡೆಗಟ್ಟಲು ಶಾಶ್ವತ ತಡೆಗೋಡೆಯ ಆವಶ್ಯಕತೆ ಬಹಳಷ್ಟಿದೆ. 1994ರಲ್ಲಿ ಬಿ.ಎ.ಮೊಯ್ದಿನ್ ಅವರು ಬಂದರ್ ಮತ್ತು ಮೀನುಗಾರಿಕಾ ಸಚಿವರಾಗಿದ್ದ ಸಂದರ್ಭ ಕೋಟೆಪುರ ಪ್ರದೇಶದಲ್ಲಿ ಸಮುದ್ರಕ್ಕೆ ತಡೆಗೋಡೆ ಕಾಮಗಾರಿ ನಡೆದಿತ್ತು. ಆದರೆ ಬಳಿಕ ಕಡಲಿನಬ್ಬರಕ್ಕೆ ಈ ತಡೆಗೋಡೆ ಸಮುದ್ರಪಾಲಾಗಿದೆ. ತದನಂತರ ಎರಡೂವರೆ ದಶಕಗಳೇ ಕಳೆದರೂ ಇಲ್ಲಿನ ಕಡಲಿನ ಆರ್ಭಟ ತಡೆಯಲು ತೀರಕ್ಕೆ ಕಲ್ಲು ಹಾಕುವ ಕೆಲಸ ಕೂಡಾ ಆಗಿಲ್ಲ. ಈ ಕಾರ್ಯವನ್ನು ಕೋಟೆಪುರದಲ್ಲಿ ಕಾರ್ಯಾಚರಿಸುತ್ತಿರುವ ಫಿಶ್‌ಮೀಲ್ ಆ್ಯಂಡ್ ಆಯಿಲ್ ಮ್ಯಾನುಫ್ಯಾಕ್ಚರ್ಸ್‌ ಅಸೋಸಿಯೇಶನ್ ಮಾಡಿಕೊಂಡು ಬರಬೇಕಾದ ಪರಿಸ್ಥಿತಿ ಬಂದಿದೆ. ಇಲ್ಲಿನ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಬಂದರ್ ಇಲಾಖೆ ನಿರ್ಲಕ್ಷ ವಹಿಸಿರುವುದಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

''ಕೋಟೆಪುರದದಲ್ಲಿ ಕಳೆದ 35 ವರ್ಷಗಳಿಂದ ಫಿಶ್‌ಮೀಲ್ ಆ್ಯಂಡ್ ಆಯಿಲ್ ಮ್ಯಾನುಫ್ಯಾಕ್ಚರ್ಸ್‌ ಅಸೋಸಿಯೇಶನ್ ಕಾರ್ಯಾಚರಿಸುತ್ತಿದೆ. ಈ ಪ್ರದೇಶ ಬಂದರ್ ಇಲಾಖೆಗೆ ಸೇರಿದ್ದರೂ ಇಲಾಖೆಯಿಂದ ಈವರೆಗೆ ಯಾವುದೇ ಸವಲತ್ತು ಇಲ್ಲಿಗೆ ಲಭಿಸಿಲ್ಲ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಎಲ್ಲ ಕಡೆ ಕಡಲ್ಕೊರೆತಕ್ಕೆ ತಡೆಗೋಡೆ ನಿರ್ಮಾಣವಾಗುತ್ತಿದ್ದರೂ ಕೋಟೆಪುರ ಪ್ರದೇಶದಲ್ಲಿ ಅದು ಸಾಕಾರಗೊಂಡಿಲ್ಲ. ಇದರಿಂದ ಇಲ್ಲಿನ ಜನಸಾಮಾನ್ಯರು ಭೀತಿಯಿಂದ ಬದುಕಬೇಕಾದ ಪರಿಸ್ಥಿತಿಯಿದೆ. ಕೆಲವು ಸಮಯದಿಂದ ಸಮುದ್ರದ ಅಲೆಗಳ ಅಬ್ಬರ ತಡೆಯಲು ತೀರಕ್ಕೆ ನಾವೇ ಕಲ್ಲು ಹಾಕಿದ್ದೇವೆ. ಇಲ್ಲಿನ ಸಮಸ್ಯೆಗಳ ಬಗ್ಗೆ ನಗರ ಸಭೆಯ ಪೌರಾಯುಕ್ತರು, ಗ್ರಾಮಕರಣಿಕರು ಕೂಡಾ ಬಂದರ್ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ಇನ್ನಾದರೂ ಬಂದರ್ ಇಲಾಖೆ ಇಲ್ಲಿನ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಲು ಮುಂದಾಗಬೇಕು.''

- ಎಚ್.ಕೆ. ಖಾದರ್, ಅಧ್ಯಕ್ಷರು
ಫಿಶ್‌ಮೀಲ್ ಆ್ಯಂಡ್ ಆಯಿಲ್ ಮ್ಯಾನುಫ್ಯಾಕ್ಚರ್ಸ್‌ ಅಸೋಸಿಯೇಶನ್, ಕೋಟೆಪುರ 

ಕೋಟೆಪುರದಲ್ಲಿ ಸಮಸ್ಯೆ ಬಹಳಷ್ಟು ಇದೆ. ಕಡಲ್ಕೊರೆತಕ್ಕೆ ತಡೆಗೋಡೆ, ರಸ್ತೆ ಸೇರಿ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಈ ಬಗ್ಗೆ ಪರಿಶೀಲನೆ ಮಾಡಿ ಬಂದರ್ ಇಲಾಖೆಯ ಗಮನ ಸೆಳೆದಿದ್ದೇವೆ. ಶೀಘ್ರದಲ್ಲಿ ಈ ಬಗ್ಗೆ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ಮಾತುಗಳು ಮಾತ್ರ ಇಲಾಖೆಯಿಂದ ಲಭಿಸುತ್ತಿದೆ.

ರಾಯಪ್ಪ,
ಪೌರಾಯುಕ್ತರು, ಉಳ್ಳಾಲ ನಗರಸಭೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News