ಟಿಕ್‌ಟಾಕ್ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದ ಟ್ವಿಟರ್

Update: 2020-08-09 18:07 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಆ. 9: ಚುಟುಕು ವೀಡಿಯೊಗಳನ್ನು ಪ್ರಸಾರ ಮಾಡುವ ಆ್ಯಪ್ ಟಿಕ್‌ಟಾಕ್‌ನ ಅಮೆರಿಕ ಘಟಕವನ್ನು ಖರೀದಿಸುವ ಇಚ್ಛೆಯನ್ನು ಟ್ವಿಟರ್ ಇಂಕ್ ವ್ಯಕ್ತಪಡಿಸಿದೆ ಹಾಗೂ ಅದು ಈ ನಿಟ್ಟಿನಲ್ಲಿ ಟಿಕ್‌ಟಾಕ್‌ನ ಮಾತೃಸಂಸ್ಥೆ ಬೈಟ್‌ಡಾನ್ಸ್‌ನ್ನು ಸಂಪರ್ಕಿಸಿದೆ.

ಈ ವಿಷಯವನ್ನು ಈ ಬೆಳವಣಿಗೆಯ ಬಗ್ಗೆ ಮಾಹಿತಿಯಿರುವ ಇಬ್ಬರು ವ್ಯಕ್ತಿಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಆದರೆ, ಟಿಕ್‌ಟಾಕನ್ನು ಖರೀದಿಸುವ ಟ್ವಿಟರ್‌ನ ಆರ್ಥಿಕ ಸಾಮರ್ಥ್ಯದ ಬಗ್ಗೆ ಪರಿಣತರು ಸಂಶಯ ವ್ಯಕ್ತಪಡಿಸಿದ್ದಾರೆ.

ಖರೀದಿ ಒಪ್ಪಂದವನ್ನು ಅಂತಿಮಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ 45 ದಿನಗಳ ಅವಧಿಯಲ್ಲಿ, ಮೈಕ್ರೋಸಾಫ್ಟ್ ಕಂಪೆನಿಗೆ ಸ್ಪರ್ಧೆ ನೀಡಿ ಟಿಕ್‌ಟಾಕ್ ಖರೀದಿ ಒಪ್ಪಂದವನ್ನು ಅಂತಿಮಗೊಳಿಸಲು ಟ್ವಿಟರ್‌ಗೆ ಸಾಧ್ಯವಾಗುವುದು ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟ್ವಿಟರ್ ಮತ್ತು ಟಿಕ್‌ಟಾಕ್ ಪ್ರಾಥಮಿಕ ಹಂತದ ಮಾತುಕತೆಯಲ್ಲಿವೆ ಹಾಗೂ ಟಿಕ್‌ಟಾಕ್‌ನ ಅಮೆರಿಕ ಘಟಕವನ್ನು ಖರೀದಿಸುವ ವಿಷಯದಲ್ಲಿ ಮೈಕ್ರೋಸಾಫ್ಟ್ ಈಗಲೂ ಮುಂಚೂಣಿಯಲ್ಲಿದೆ ಎಂದು ಇದಕ್ಕೂ ಮೊದಲು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News