‘ಜೀವ ಪಣಕ್ಕಿಟ್ಟ ನಿಮ್ಮ ಮಾನವೀಯತೆಗೆ ತಲೆಬಾಗುತ್ತೇವೆ’: ಮಲಪ್ಪುರಂನ ಜನರಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಧನ್ಯವಾದ

Update: 2020-08-10 08:21 GMT

ಹೊಸದಿಲ್ಲಿ : ಕಳೆದ ಶುಕ್ರವಾರ ರಾತ್ರಿ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ  18 ಜನರನ್ನು ಬಲಿ ಪಡೆದ  ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದ  ಸಂದರ್ಭ  ಗಾಯಾಳುಗಳಿಗೆ ನೆರವಾಗಿ ಮಾನವೀಯತೆ ಮೆರೆದ ಕೇರಳ ಮಲಪ್ಪುರಂ ಜನತೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಧನ್ಯವಾದ ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿದ ಏರ್ ಇಂಡಿಯಾ ಎಕ್ಸ್ ಪ್ರೆಸ್, “ಮಾನವೀಯತೆಗೆ ತಲೆಬಾಗುತ್ತೇವೆ! ಈ ಅನಿರೀಕ್ಷಿತ ಘಟನೆಯ ಸಂದರ್ಭ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ಕೇರಳದ ಮಲಪ್ಪುರಂ ಜನತೆಗೆ ನಮ್ಮ ಹೃದಯಾಂತರಾಳದ ಕೃತಜ್ಞತೆಗಳು. ನಾವು ನಿಮಗೆ ಚಿರಋಣಿ! #ಎಕ್ಸ್ ಪ್ರೆಸ್ ಗ್ರಾಟಿಟ್ಯೂಡ್'' ಎಂದು ಬರೆದಿದೆ.

“ಒಂದು ಜೀವ  ಉಳಿಸಲು  ಧೈರ್ಯ ಮಾತ್ರವಲ್ಲದೆ ಮಾನವೀಯತೆಯ ಸ್ಪರ್ಶವೂ ಅಗತ್ಯ. ಹಲವಾರು ಮಂದಿಯನ್ನು ರಕ್ಷಿಸಲು ತಮ್ಮ ಜೀವಗಳನ್ನೇ ಪಣಕ್ಕಿಟ್ಟ ಮಲಪ್ಪುರಂ ಜನತೆಗೆ ಏರ್ ಇಂಡಿಯಾ ಎಕ್ಸ್‍ಪ್ರೆಸ್‍ ನ ನಾವು ಧನ್ಯವಾದ ಹೇಳುತ್ತೇವೆ'' ಎಂದು ಟ್ವೀಟ್‍ ನಲ್ಲಿ ಬರೆಯಲಾಗಿದೆ.

ಕೋಯಿಕ್ಕೋಡ್ ವಿಮಾನ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಸಂತಾಪ ಸೂಚಿಸುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್  ಲಾಂಛನವನ್ನು ಕಪ್ಪು ಬಣ್ಣ ಮಾಡಲಾಗಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಧಿಕೃತ ಹ್ಯಾಂಡಲ್‍ ಗಳಲ್ಲಿ  ಕವರ್ ಹಾಗೂ ಪ್ರೊಫೈಲ್ ಫೋಟೋಗಳಲ್ಲಿ ಲಾಂಛನವನ್ನು ಕಪ್ಪು ಹಿನ್ನೆಲೆಯಲ್ಲಿ ತೋರಿಸಲಾಗಿದೆ. ಸಾಮಾನ್ಯವಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್  ಲಾಂಛನದಲ್ಲಿ ಕೆಂಪು ಮತ್ತು ಹಳದಿ ಬಣ್ಣ ಪ್ರಮುಖವಾಗಿದ್ದರೆ ಹಿನ್ನೆಲೆಯಲ್ಲಿ ಬಿಳಿ ಬಣ್ಣ ಇರುತ್ತದೆ.

ಅಪಪ್ರಚಾರಕ್ಕೆ ತಿರುಗೇಟು: ಇತ್ತೀಚೆಗೆ ಪಾಲಕ್ಕಾಡ್ ಜಿಲ್ಲೆಯಲ್ಲಿ ಆನೆಯೊಂದು ಸ್ಫೋಟಕ ತುಂಬಿದ್ದ ಹಣ್ಣು ತಿಂದು ಮೃತಪಟ್ಟ ಘಟನೆಗೆ ಸಂಬಂಧಿಸಿ ಮಲಪ್ಪುರಂ ಮತ್ತು ಅಲ್ಲಿನ ನಿವಾಸಿಗಳ ಬಗ್ಗೆ ವ್ಯಾಪಕ ಅಪಪ್ರಚಾರ ನಡೆಸಲಾಗಿತ್ತು. ಘಟನೆ ಪಾಲಕ್ಕಾಡ್ ನಲ್ಲಿ ನಡೆದಿದ್ದರೆ ಬಿಜೆಪಿ ಸಂಸದೆ ಮೇನಕಾ ಗಾಂಧಿ ಘಟನೆ ಮಲಪ್ಪುರಂನಲ್ಲಿ ನಡೆದಿತ್ತು ಎಂದು ಸುಳ್ಳು ಹೇಳಿದ್ದರು. ನಂತರ ಟ್ವಿಟರ್, ಫೇಸ್ ಬುಕ್ , ವಾಟ್ಸ್ಯಾಪ್ ಗಳಲ್ಲಿ ಕೇಸರಿ ಟ್ರೋಲ್ ಗಳು ಮಲಪ್ಪುರಂ ಬಗ್ಗೆ ಅಪಪ್ರಚಾರ ನಡೆಸಲು ಆರಂಭಿಸಿದ್ದರು. ಮಲಪ್ಪುರಂನಲ್ಲಿ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿವೆ ಎನ್ನುವ ಸುಳ್ಳನ್ನು ಹರಡಲಾಗಿತ್ತು. ಆದರೆ ವಿಮಾನ ದುರಂತದ ಸಂದರ್ಭ ಕೂಡಲೇ ಸ್ಥಳಕ್ಕೆ ಧಾವಿಸಿ ಹಲವರ ಪ್ರಾಣ ಉಳಿಸಿದ್ದು ಇದೇ ಮಲಪ್ಪುರಂ ನಿವಾಸಿಗಳು. ಹಾಗಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮಲಪ್ಪುರಂ ಜನರ ಮಾನವೀಯತೆಗೆ ತಲೆಬಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News