743 ಸಿಬ್ಬಂದಿಗೆ ಕೊರೋನ ಪಾಸಿಟಿವ್ ಆದರೂ ತೆರೆಯಲಿದೆ ತಿರುಪತಿ ದೇವಾಲಯ

Update: 2020-08-10 18:32 GMT

ಬೆಂಗಳೂರು: ಕೊರೋನ ಬಿಕ್ಕಟ್ಟಿನ ನಡುವೆಯೇ ತಿರುಪತಿ ದೇವಾಲಯವು ತೆರೆಯಲಿದೆ. ಆದರೆ ಈಗಾಗಲೇ ದೇವಾಲಯದ 743 ಸಿಬ್ಬಂದಿ ಕೊರೋನ ಪಾಸಿಟಿವ್ ಆಗಿದ್ದು, ಮೂವರು ಸೋಂಕಿಗೆ ಬಲಿಯಾಗಿದ್ದಾರೆ.

ಇಲ್ಲಿ ಪರಿಸ್ಥಿತಿ ಗಂಭೀರವಾಗಿದ್ದರೂ ದೇವಾಲಯವನ್ನು ತೆರೆಯಲು ನಿರ್ಧರಿಸಲಾಗಿದ್ದು, ದೇವಾಲಯ ಮುಚ್ಚುವ ಯಾವುದೇ ಆಲೋಚನೆಯಿಲ್ಲ ಎನ್ನಲಾಗಿದೆ.

“ಇದು ತಿರುಪತಿಯಲ್ಲಿ ಮಾತ್ರ ಇರುವುದಲ್ಲ, ಆಂಧ್ರಪ್ರದೇಶದಾದ್ಯಂತ ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿಗೆ ಬಂದು ತಿಮ್ಮಪ್ಪನ ದರ್ಶನ ಪಡೆದರೆ ಎಲ್ಲವೂ ಸರಿಯಾಗಲಿದೆ ಎಂದು ಭಕ್ತರು ನಂಬುತ್ತಾರೆ” ಎಂದು ತಿರುಪತಿ ದೇವಾಲಯ ಟ್ರಸ್ಟ್  ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಹೇಳಿದ್ದಾರೆ.

“ನಮ್ಮ ಹಿತ ಕಾಪಾಡಲು ಬಾಲಾಜಿ ಇದ್ದಾನೆ. ಇಂತಹ ಬಿಕ್ಕಟ್ಟಿನಲ್ಲಿ ಅವನು ನಮ್ಮನ್ನು ಮುನ್ನಡೆಸುತ್ತಾನೆ” ಎಂದವರು ಹೇಳುತ್ತಾರೆ. ಸಿಬ್ಬಂದಿ ಮತ್ತು ಭಕ್ತರ ಸ್ಕ್ರೀನಿಂಗನ್ನು ನಡೆಸಲಾಗುವುದು. ಆದರೆ ದೇವಾಲಯ ಮುಚ್ಚಲು ಯಾವುದೇ ಕಾರಣಗಳಿಲ್ಲ ಎಂದವರು ಹೇಳುತ್ತಾರೆ.

ಆಂಧ್ರಪ್ರದೇಶದ ತಿರುಮಲ ವೆಂಕಟೇಶ್ವರ ದೇವಾಲಯ ಜೂನ್ 11ರಂದು ಮರು ತೆರೆದ ಬಳಿಕ ತಿರುಮಲ ತಿರುಪತಿ ದೇವಸ್ಥಾನದ 743ಕ್ಕೂ ಅಧಿಕ ನೌಕರರು ಕೊರೋನ ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೆ, ಇದುವರೆಗೆ ಮೂವರು ನೌಕರರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಟ್ರಸ್ಟ್‌ನ ಕಾರ್ಯನಿರ್ವಹಣಾ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ.

ಕೊರೋನ ಸೋಂಕಿಗೆ ಒಳಗಾದವರಲ್ಲಿ ವಿಶೇಷ ಭದ್ರತಾ ಪಡೆ, ಜಾಗೃತ ಇಲಾಖೆ ಸಿಬ್ಬಂದಿ, ನೈರ್ಮಲ್ಯ ಕೆಲಸಗಾರರು, ಹೊರ ಗುತ್ತಿಗೆ ಕಾರ್ಮಿಕರು ಹಾಗೂ ಖಾಯಂ ಕಾರ್ಮಿಕರು ಒಳಗೊಂಡಿದ್ದಾರೆ. ಇದುವರೆಗೆ ಕೊರೋನದಿಂದ ಒಟ್ಟು 402 ಮಂದಿ ಗುಣಮುಖರಾಗಿದ್ದಾರೆ ಎಂದು ಸಿಂಘಾಲ್ ಹೇಳಿದ್ದಾರೆ.

 ಜುಲೈಯಲ್ಲಿ ಸುಮಾರು 2.38 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ದೇವಾಲಯ ಮರು ತೆರೆದ ಬಳಿಕ ಪ್ರತಿ ದಿನ 12 ಸಾವಿರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

 ಕೊರೋನ ವೈರಸ್ ಸೋಂಕು ಹರಡುತ್ತಿರುವ ನಡುವೆ ದೇವಾಲಯವನ್ನು ತೆರೆದಿರುವುದು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಎಂಬ ವರದಿಯನ್ನು ಅವರು ನಿರಾಕರಿಸಿದ್ದಾರೆ. ‘‘ಆರಂಭದಲ್ಲಿ ಎಲ್ಲರೂ ತಿರುಪತಿ ತಿರುಮಲ ದೇವಸ್ಥಾನದ ನಿರ್ಧಾರವನ್ನು ಸ್ವಾಗತಿಸಿದ್ದರು’’ ಎಂದು ಸಿಂಘಾಲ್ ಹೇಳಿದ್ದಾರೆ.

‘‘ಲಾಭ ಮಾಡಿಕೊಳ್ಳುವುದಕ್ಕಿಂತ ದೊಡ್ಡ ಮೊತ್ತದ ಹಣವನ್ನು ಕೊರೋನ ಮುನ್ನೆಚ್ಚರಿಕೆ ಕ್ರಮಗಳಿಗೆ ದೇವಾಲಯದ ಟ್ರಸ್ಟ್ ವೆಚ್ಚ ಮಾಡುತ್ತಿದೆ. ಇದುವರೆಗೆ ಭಕ್ತರು ತಿರುಮಲ ತಿರುಪತಿ ದೇವಸ್ಥಾನದ ದರ್ಶನ, ವಾಸ್ತವ್ಯ, ಕಲ್ಯಾಣ ಕಟ್ಟ, ಲಾಡು, ಅನ್ನಪ್ರಸಾದಂ ಹಾಗೂ ಇತರ ಸೌಲಭ್ಯಗಳ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.

‘‘ತಿರುಪತಿಯಲ್ಲಿ ಮಾತ್ರ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದಲ್ಲ, ದೇಶ, ರಾಜ್ಯ ಕೂಡ ಇದೇ ಪರಿಸ್ಥಿತಿ ಎದುರಿಸುತ್ತಿದೆ’’ ಎಂದು ಸಿಂಘಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News