​ಎಸೆಸೆಲ್ಸಿ ಫಲಿತಾಂಶ: ‘ಎ’ ಗ್ರೇಡ್ ಪಡೆದ ಉಡುಪಿ ಜಿಲ್ಲೆ

Update: 2020-08-10 16:44 GMT

ಉಡುಪಿ, ಆ.10: ಕೋವಿಡ್-19 ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ನಡುವೆ ನಡೆದ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ ರಾಜ್ಯದ ಇತರ 9 ಜಿಲ್ಲೆಗಳೊಂದಿಗೆ ವಿದ್ಯಾರ್ಥಿಗಳ ಉತ್ತೀರ್ಣತೆಯಲ್ಲಿ ‘ಎ’ ಗ್ರೇಡ್ ಪಡೆದಿದೆ.

ಇದೇ ಮೊದಲ ಬಾರಿಗೆ ಜಿಲ್ಲೆಗಳಿಗೆ ರ್ಯಾಂಕಿಂಗ್ ಬದಲು ಗ್ರೇಡ್ ನೀಡಲಾಗಿದ್ದು, ಉಡುಪಿ ಜಿಲ್ಲೆಯ ಎಲ್ಲಾ ಐದು ವಲಯಗಳು ಸಹ ‘ಎ’ಗ್ರೇಡ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ತೋರಿವೆ. ಜಿಲ್ಲೆಯ ಒಟ್ಟು ಫಲಿತಾಂಶದ ಶೇ.40ರಷ್ಟು, ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳ ಸರಾಸರಿ ಅಂಕ ಶೇ.40 ಹಾಗೂ ಅತ್ಯುನ್ನತ ದರ್ಜೆ ಹಾಗೂ ಪ್ರಥಮ ದರ್ಜೆ ಉತ್ತೀರ್ಣತಾ ಪ್ರಮಾಣದ ಶೇ.20ರಷ್ಟು ಪರಿಗಣನೆಗೆ ಪಡೆದು ಗ್ರೇಡ್ ನೀಡ ಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಉಡುಪಿ ಜಿಲ್ಲೆ ಎ ಗ್ರೇಡ್‌ನೊಂದಿಗೆ ಏಳನೇ ಸ್ಥಾನ ಪಡೆದಿದೆ. ಉಳಿದಂತೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಧುಗಿರಿ, ಮಂಡ್ಯ, ಚಿತ್ರದುರ್ಗ ಕೋಲಾರ, ರಾಮನಗರ, ಹಾಸನ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಸಹ ‘ಎ’ ಗ್ರೇಡ್ ಪಡೆದಿವೆ.

ಕಳೆದ ವರ್ಷ ಉಡುಪಿ ಜಿಲ್ಲೆ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಾಗ ಐದನೇ ಸ್ಥಾನ ಪಡೆದಿತ್ತು. ಬಳಿಕ ಮರು ಮೌಲ್ಯಮಾಪನಗಳೆಲ್ಲಾ ಮುಗಿದ ಬಳಿಕ ಪ್ರಕಟಿಸಲಾದ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿತ್ತು ಎಂದು ಡಿಡಿಪಿಐ ಶೇಷಶಯನ ಕಾರಿಂಜ ತಿಳಿಸಿದರು. ಈ ಬಾರಿಯೂ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿ ಉಳಿದ 9 ಜಿಲ್ಲೆಗಳೊಂದಿಗೆ ‘ಎ’ ಗ್ರೇಡ್‌ನಲ್ಲಿದೆ ಎಂದರು.

ಈ ಬಾರಿ ಉಡುಪಿ ಜಿಲ್ಲೆಯ ಸಾಧನೆಯ ಮತ್ತೊಂದು ವೈಶಿಷ್ಯವೆಂದರೆ ಜಿಲ್ಲೆಯ ಎಲ್ಲಾ ಐದು ವಲಯಗಳೂ ‘ಎ’ಗ್ರೇಡ್‌ನ್ನು ಪಡೆದಿರುವುದು. ಬೈಂದೂರು, ಕುಂದಾಪುರ, ಕಾರ್ಕಳ, ಉಡುಪಿ ಉತ್ತರ ಹಾಗೂ ಉಡುಪಿ ದಕ್ಷಿಣ ವಲಯಗಳು ಫಲಿತಾಂಶದಲ್ಲಿ ‘ಎ’ ಗ್ರೇಡ್ ಪಡೆದಿವೆ.

159 ಶಾಲೆಗಳಿಗೆ ‘ಎ’ಗ್ರೇಡ್:  ಉಡುಪಿ ಜಿಲ್ಲೆಯಲ್ಲಿ ಒಟ್ಟು 159 ಶಾಲೆಗಳು ‘ಎ’ಗ್ರೇಡ್‌ನ್ನು ಪಡೆದಿವೆ. ಉಳಿದಂತೆ 79 ಶಾಲೆಗಳಿಗೆ ‘ಬಿ’ಗ್ರೇಡ್ ಹಾಗೂ 23 ಶಾಲೆಗಳಿಗೆ ‘ಸಿ’ಗ್ರೇಡ್ ದೊರೆತಿದೆ. ಬೈಂದೂರು ವಲಯದಲ್ಲಿ 21 ಶಾಲೆಗಳು ಎ, 9 ಶಾಲೆಗಳು ಬಿ, ಒಂದು ಶಾಲೆಗಳು ಸಿ ಗ್ರೇಡ್ ಪಡೆದಿವೆ. ಕುಂದಾಪುರ ವಲಯದಲ್ಲಿ 24 ಶಾಲೆಗಳು ಎ, 15 ಶಾಲೆಗಳು ಬಿ ಹಾಗೂ ಮೂರು ಶಾಲೆಗಳು ಸಿ ಗ್ರೇಡ್ ಪಡೆದುಕೊಂಡಿವೆ.

ಕಾರ್ಕಳ ವಲಯದಲ್ಲಿ 37 ಶಾಲೆಗಳು ಎ ಗ್ರೇಡ್, 13 ಶಾಲೆಗಳು ಬಿ ಗ್ರೇಡ್, ಆರು ಶಾಲೆಗಳು ಸಿ ಗ್ರೇಡ್‌ನ್ನೂ, ಉಡುಪಿ ಉತ್ತರ ವಲಯ (ಬ್ರಹ್ಮಾವರ) ದಲ್ಲಿ 38 ಶಾಲೆಗಳು ಎ ಗ್ರೇಡ್, 17 ಶಾಲೆಗಳು ಬಿ ಗ್ರೇಡ್, ಮೂರು ಶಾಲೆಗಳು ಸಿ ಗ್ರೇಡ್ ಪಡೆದರೆ, ಉಡುಪಿ ದಕ್ಷಿಣ ವಲಯದಲ್ಲಿ 39 ಶಾಲೆಗಳು ಎ ಗ್ರೇಡ್, 25 ಶಾಲೆಗಳು ಬಿ ಗ್ರೇಡ್ ಹಾಗೂ 10 ಶಾಲೆಗಳು ಸಿ ಗ್ರೇಡ್ ಪಡೆದಿವೆ.

ಸುರಭಿ ಶೆಟ್ಟಿ ಜಿಲ್ಲೆಗೆ ಪ್ರಥಮ: ಬೈಂದೂರು ವಲಯದ ಕಿರಿಮಂಜೇಶ್ವರದ ಸಾಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಸುರಭಿ ಎಸ್.ಶೆಟ್ಟಿ ಅವರು ಗರಿಷ್ಠ 625ರಲ್ಲಿ 624 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಟಾಪರ್ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಮೊದಲಿಗರಾಗಿ ಮೂಡಿ ಬಂದಿದ್ದಾರೆ.

ಅನುದಾನಿತ ಶಾಲೆಗಳ ಪೈಕಿ ಬ್ರಹ್ಮಾವರ ತಾಲೂಕು ಹಂಗಾರಕಟ್ಟೆಯ ಚೇತನಾ ಪ್ರೌಢ ಶಾಲೆಯ ಗ್ರೀಷ್ಮ ಶೆಟ್ಟಿಗಾರ್ ಕನ್ನಡ ಮಾಧ್ಯಮದಲ್ಲಿ ಒಟ್ಟು 621 ಅಂಕಗಳನ್ನು ಪಡೆದು ಅಗ್ರಸ್ಥಾನಿಯಾಗಿದ್ದಾರೆ.

ಸರಕಾರಿ ಪ್ರೌಢ ಶಾಲೆಗಳ ಪೈಕಿ ಉಡುಪಿ ವಳಕಾಡಿನ ಸರಕಾರಿ ಪ್ರೌಢ ಶಾಲೆಯ ಭವ್ಯ ನಾಯಕ್ 621 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ದ್ದರೆ, ಕುಂದಾಪುರ ತಾಲೂಕು ಬಸ್ರೂರಿನ ಸರಕಾರಿ ಪ್ರೌಢಶಾಲೆಯ ಶ್ರಾವ್ಯ ಮೊಗವೀರ 621 ಅಂಕಗಳೊಂದಿಗೆ ಎರಡನೇ ಹಾಗೂ ಕಾರ್ಕಳ ತಾಲೂಕು ಪೆರ್ವಾಜೆಯ ಸುಂದರ ಪುರಾಣಿಕ ಸರಕಾರಿ ಪ್ರೌಢ ಶಾಲೆಯ ಯು.ಎಸ್. ಅಧ್ವೈತ ಶರ್ಮ 620 ಅಂಕಗಳೊಂದಿಗೆ ಜಿಲ್ಲೆಯಲ್ಲಿ ಮೂರನೇ ಸ್ಥಾನಿಯಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿ ಶೇ.100 ಫಲಿತಾಂಶದ ಶಾಲೆಗಳು

ಈವರೆಗೆ ತಿಳಿದುಬಂದ ಮಾಹಿತಿ.ಯಂತೆ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬೈಂದೂರು ವಲಯದ ಚಿತ್ತೂರು ಸರಕಾರಿ ಪ್ರೌಢ ಶಾಲೆ, ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಕಮಲಶಿಲೆ ಶ್ರೀದುರ್ಗಾಪರಮೇಶ್ವರಿ ಪ್ರೌಢ ಶಾಲೆ, ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಗಳು ಶೇ.100 ಫಲಿತಾಂಶಗಳನ್ನು ಪಡೆದಿದೆ.

ಉಡುಪಿ ವಲಯದ ಹೆಜಮಾಡಿಕೋಡಿ ಸರಕಾರಿ ಪ್ರೌಢ ಶಾಲೆ, ಉಡುಪಿ ಅನಂತೇಶ್ವರ ಪ್ರೌಢ ಶಾಲೆ, ಕಟಪಾಡಿಯ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆ, ಅದಮಾರಿನ ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ.

ಬ್ರಹ್ಮಾವರ ವಲಯದ ನುಕ್ಕೂರು ಸರಕಾರಿ ಪ್ರೌಢ ಶಾಲೆ, ಬ್ರಹ್ಮಾವರದ ಮೊರಾರ್ಜಿ ದೇಸಾಯಿ ಪ್ರೌಢ ಶಾಲೆ, ಕಲ್ಯಾಣಪುರ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಕಲ್ಯಾಣಪುರದ ವೌಂಟ್ ರೋಸರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ.

ಕುಂದಾಪುರ ವಲಯದ ಲಿಟ್ಲ್‌ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಡ ಶಾಲೆ ಯಡಾಡಿ ಮತ್ಯಾಡಿ, ಎಸ್.ವಿ.ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗಂಗೊಳ್ಳಿ, ಮದರ್ ತೆರೇಸಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಶಂಕರನಾರಾಯಣ, ಸ್ಟೆಲ್ಲಾ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ. ಕಾರ್ಕಳ ವಲಯದ ಮಿಯಾರು ಮೊರಾರ್ಜಿ ದೇಸಾಯಿ ಪ್ರೌಢ ಶಾಲೆ, ಕಾರ್ಕಳ ಭುವನೇಂದ್ರ ಕನ್ನಡ ಮಾಧ್ಯಮ ಪ್ರೌಢ ಶಾಲೆ, ನಿಟ್ಟೆ ಎನ್‌ಎಸ್‌ಎಎಂ ಅನುದಾನಿತ ಪ್ರೌಢ ಶಾಲೆ, ಗಣಿತನಗರದ ಜ್ಞಾನಸುಧಾ ಪ್ರೌಢ ಶಾಲೆ, ಹಿರ್ಗಾನ ಸಂತ ಮರಿಯಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಅಜೆಕಾರು ಚರ್ಚ್ ಪ್ರೌಢ ಶಾಲೆ, ಸಚ್ಚೇರಿಪೇಟೆ ಲಯನ್ಸ್ ಪ್ರೌಢ ಶಾಲೆ ಹಾಗೂ ಬಜಗೋಳಿ ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆ, ಎಸ್‌ವಿಟಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಾರ್ಕಳ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News