ಉಡುಪಿ ಜಿಲ್ಲೆಯಲ್ಲಿ ಮುಂದುವರಿದೆ ಮಳೆ : ನಾವುಂದ, ಚಿತ್ರಪಾಡಿಗಳಲ್ಲಿ ನೆರೆ

Update: 2020-08-10 14:59 GMT

ಉಡುಪಿ, ಆ.10: ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಇಂದು ಬೆಳಗಿನ ಜಾವ ಬೈಂದೂರು ಹಾಗೂ ಬ್ರಹ್ಮಾವರ ತಾಲೂಕಿನ ಹಲವೆಡೆ ನೆರೆ ಉಂಟಾಗಿ, ಹಲವು ಮನೆಗಳು ಜಲಾವೃತಗೊಂಡಿರುವ ಬಗ್ಗೆ ವರದಿ ಯಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 127.0 ಮಿ.ಮೀ. ಮಳೆಯಾಗಿದೆ. ಉಡುಪಿ- 119.0ಮಿ.ಮೀ., ಕುಂದಾಪುರ- 151.0ಮಿ.ಮೀ.,ಕಾರ್ಕಳ- 98.5 ಮಿ.ಮೀ. ಮಳೆಯಾಗಿದೆ.

ಕೊಲ್ಲೂರು ಪಶ್ಚಿಮಘಟ್ಟದಲ್ಲಿ ಭಾರೀ ಮಳೆಯಾದ ಪರಿಣಾಮ ಸೌರ್ಪಣಿಕ ನದಿ ತುಂಬಿ ಹರಿದ ಪರಿಣಾಮ ನಾವುಂದ, ನಾಡಾ, ಬಡಾಕೆರೆಗಳಲ್ಲಿ ತಗ್ಗಿದ ನೆರೆ ಮತ್ತೆ ಕಂಡುಬಂದಿದೆ. ಇದರಿಂದ ಆ ಪ್ರದೇಶಗಳಲ್ಲಿರುವ ಹಲವು ಮನೆ ಗಳು ಜಲಾವೃತಗೊಂಡಿವೆ. ಆದರೆ ಎಲ್ಲೂ ಯಾವುದೇ ಅಪಾಯ ಅಥವಾ ಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಪ್ರದೇಶಗಳಲ್ಲಿ ಬೆಳಗಿನ ಜಾವ ಕಾಣಿಸಿಕೊಂಡ ನೆರೆ ಮಧ್ಯಾಹ್ನ ವೇಳೆ ತಗ್ಗಿವೆ. ಇಲ್ಲಿಯ ಜನತೆಗೆ ಅನುಕೂಲವಾಗಲು ಗ್ರಾಪಂ ವತಿಯಿಂದ ದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯ ಬೈಂದೂರು ತಾಲೂಕಿನ ಎಲ್ಲೂ ಪ್ರವಾಹ ಪರಿಸ್ಥಿತಿ ಇಲ್ಲ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದ್ದಾರೆ.

ಚಿತ್ರಪಾಡಿ ಪರಿಸರದಲ್ಲಿ ನೆರೆ: ಸಾಲಿಗ್ರಾಮ ಚಿತ್ರಪಾಡಿ ಗ್ರಾಮದ ಬೆಟ್ಲಕ್ಕಿ, ಮಂಡಾಜೆಡ್ಡು, ಹೊಳೆಕೆರೆ ಎಂಬಲ್ಲಿ ನೆರೆ ಉಂಟಾಗಿದ್ದು, ಸುಮಾರು ಏಳೆಂಟು ಮನೆಗಳು ಜಲಾವೃತಗೊಂಡಿವೆ.

ಇಲ್ಲಿನ ಸುಮಾರು ಏಳು ಮನೆಗಳ ಅಂಗಳಕ್ಕೆ ನೆರೆ ನೀರು ನುಗ್ಗಿದು, ಮೊಣ ಕಾಲಿನವರೆಗೂ ನೀರು ಏರಿಕೆ ಕಂಡಿದೆ. ಮುಂದೆ ನೀರು ಏರಿಕೆ ಯಾದರೆ ಇಲ್ಲಿನ ಮನೆಯವರನ್ನು ಸ್ಥಳಾಂತರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅದೇ ರೀತಿ ಬೆಟ್ಲಕ್ಕಿ, ಹೊಳೆಕೆರೆ, ಮಂಡಾಜೆಡ್ಡು ಭಾಗದಲ್ಲಿ ಸುಮಾರು 15 ಎಕರೆ ಭತ್ತದ ಬೆಳೆಯು ಸಂಪೂರ್ಣ ನೆರೆ ನೀರಿನಿಂದ ಆವೃತವಾಗಿದೆ.

ನೆರೆ ಪೀಡಿತ ಪ್ರದೇಶಗಳಿಗೆ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪರಿಸರದಲ್ಲಿ ದೋಣಿಯ ವ್ಯವಸ್ಥೆ ಮಾಡಲಾಗಿದ್ದು, ದೋಣಿ ಮಾಲಿಕರಿಗೆ ತುರ್ತು ಸಹಕರಿಸುವಂತೆ ಸೂಚಿಸ ಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಹಲವು ಮನೆಗಳಿಗೆ ಹಾನಿ:  ಕುಂದಾಪುರ ತಾಲೂಕಿನ ಜಪ್ತಿ ಗ್ರಾಮದ ಹರೀಶ ಶೆಟ್ಟಿ ಎಂಬವರ ಮನೆಗೆ ಹಾನಿಯಾಗಿ40ಸಾವಿರ ರೂ., ವಡೇರ ಹೋಬಳಿ ಗ್ರಾಮದ ಗಿರಿಜಮ್ಮ ಪೂಜಾರ್ತಿ ಮನೆ ಭಾಗಶಃ ಹಾನಿಯಾಗಿ 35,000ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಕಾಪು ತಾಲೂಕಿನ ಬೆಳಪು ಗ್ರಾಮದ ಶಂಕರ ಶೆಟ್ಟಿ ಮನೆಯ ಅಡುಗೆ ಕೋಣೆ ಸಂಪೂರ್ಣ ಹಾನಿಯಾಗಿ 80,000ರೂ., ಕಳತ್ತೂರು ಗ್ರಾಮದ ಪ್ರಮೀಳ ಎಂಬವರ ಮನೆ ಗಾಳಿ-ಮಳೆಯಿಂದ ಭಾಗಶಃ ಹಾನಿಯಾಗಿ 30,000ರೂ. ನಷ್ಟವಾಗಿದೆ. ಬ್ರಹ್ಮಾವರ ತಾಲೂಕಿನ ಹೇರಾಡಿ ಗ್ರಾಮದ ಪ್ರೇಮಾ ಶೆಡ್ತಿ ಮನೆಗೆ 30000ರೂ., ಐರೋಡಿ ಗ್ರಾಮದ ಬೇಬಿ ಮಡಿವಾಳ್ತಿ ಮನೆಗೆ 10ಸಾವಿರ ರೂ., ಗುಂಡ್ಮಿಯ ಗೋವಿಂದ ಮನೆಗೆ 30,000ರೂ., ನಡೂರು ಗ್ರಾಮದ ಕಾವೇರಿ ಮನೆಗೆ 10000ರೂ., ವಾರಂಬಳ್ಳಿ ಗ್ರಾಮದ ವಾರಿಜ ಮನೆ ಸಂಪೂರ್ಣ ಹಾನಿಯಾಗಿ 1,00,000ರೂ., ಕಾರ್ಕಡ ಗ್ರಾಮದ ಮಂಜಿ ಪೂಜಾರ್ತಿ ಮನೆಗೆ 40000ರೂ., ಚಾಂತಾರು ಗ್ರಾಮದ ರಸ ಬಾಯಿ ಮನೆ ಸಂಪೂರ್ಣ ಹಾನಿಯಾಗಿ 1,50,000ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News