ತೈವಾನ್‌ಗೆ ಅಮೆರಿಕ ಆರೋಗ್ಯ ಕಾರ್ಯದರ್ಶಿ ಭೇಟಿ

Update: 2020-08-10 16:12 GMT

ತೈಪೆ (ತೈವಾನ್), ಆ. 10: ಅಮೆರಿಕ ಸಚಿವ ಸಂಪುಟದ ಸದಸ್ಯರೊಬ್ಬರು ಸೋಮವಾರ ತೈವಾನ್ ಅಧ್ಯಕ್ಷೆ ಸೈ ಇಂಗ್-ವೆನ್‌ರನ್ನು ರಾಜಧಾನಿ ತೈಪೆಯಲ್ಲಿ ಭೇಟಿಯಾಗಿದ್ದಾರೆ. 1979ರಲ್ಲಿ ಅಮೆರಿಕವು ತೈವಾನ್‌ಗೆ ನೀಡುತ್ತಿದ್ದ ಮಾನ್ಯತೆಯನ್ನು ಚೀನಾಕ್ಕೆ ವರ್ಗಾಯಿಸಿದ ಬಳಿಕ, ಅಮೆರಿಕದ ಉನ್ನತ ಮಟ್ಟದ ರಾಜತಾಂತ್ರಿಕರೊಬ್ಬರು ತೈವಾನ್ ಮುಖ್ಯಸ್ಥರನ್ನು ಭೇಟಿಯಾಗುವುದು ಇದೇ ಮೊದಲ ಬಾರಿಯಾಗಿದೆ.

ಉಭಯ ದೇಶಗಳು ಹೊಂದಿರುವ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಉತ್ತೇಜನ ನೀಡಲು ಹಾಗೂ ಕೊರೋನ ವೈರಸ್ ಸಾಂಕ್ರಾಮಿಕವನ್ನು ಹತೋಟಿಗೆ ತರುವಲ್ಲಿ ತೈವಾನ್ ಗಳಿಸಿದ ಯಶಸ್ಸನ್ನು ಅಭಿನಂದಿಸುವುದಕ್ಕಾಗಿ ಅಮೆರಿಕದ ಆರೋಗ್ಯ ಕಾರ್ಯದರ್ಶಿ ಅಲೆಕ್ಸ್ ಆ್ಯಝರ್ ತೈವಾನ್‌ಗೆ ಮೂರು ದಿನಗಳ ಭೇಟಿ ನೀಡಿದ್ದಾರೆ.

ಅಮೆರಿಕ ಮತ್ತು ಚೀನಾಗಳ ನಡುವಿನ ಸಂಬಂಧವು ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿರುವ ಸಮಯದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕರೊಬ್ಬರು ತೈವಾನ್‌ಗೆ ಭೇಟಿ ನೀಡಿರುವುದು ಗಮನಾರ್ಹವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ವ್ಯಾಪಾರ, ಸೇನೆ ಮತ್ತು ಭದ್ರತಾ ವಿಷಯಗಳು ಹಾಗೂ ಕೊರೋನ ವೈರಸ್ ಸಾಂಕ್ರಾಮಿಕಗಳ ವಿಷಯಗಳಲ್ಲಿ ಅಮೆರಿಕ ಮತ್ತು ಚೀನಾಗಳ ನಡುವಿನ ಸಂಬಂಧ ತೀರಾ ಹಳಸಿದೆ.

ತೈವಾನ್ ತನಗೆ ಸೇರಿದ ಭೂಭಾಗವಾಗಿದೆ ಎಂದು ಚೀನಾ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದೆ ಹಾಗೂ ಒಂದಲ್ಲ ಒಂದು ದಿನ ಅದನ್ನು ಮಾತೃಭೂಮಿ ಚೀನಾಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿದೆ.

ಸೋಮವಾರ ಬೆಳಗ್ಗೆ ಆ್ಯಝರ್ ತೈವಾನ್ ಅಧ್ಯಕ್ಷೆಯನ್ನು ಭೇಟಿಯಾದರು. ‘‘ಕೊರೋನ ವೈರಸ್ ಸಾಂಕ್ರಾಮಿಕವನ್ನು ನಿಭಾಯಿಸಲು ತೈವಾನ್ ತೆಗೆದುಕೊಂಡಿರುವ ಕ್ರಮಗಳು ತೈವಾನ್ ಸಮಾಜದ ಮುಕ್ತ, ಪಾರದರ್ಶಕ ಹಾಗೂ ಪ್ರಜಾಸತ್ತಾತ್ಮಕ ಗುಣಲಕ್ಷಣಗಳನ್ನು ಬಿಂಬಿಸಿದೆ ಹಾಗೂ ಸಾಂಕ್ರಾಮಿಕವನ್ನು ನಿಬಾಯಿಸುವಲ್ಲಿ ಅದು ತೆಗೆದುಕೊಂಡಿರುವ ಕ್ರಮಗಳು ಜಗತ್ತಿನ ಯಶಸ್ವಿ ಪ್ರಯತ್ನಗಳ ಪೈಕಿ ಒಂದಾಗಿದೆ’’ ಎಂದು ಆ್ಯಝರ್ ಈ ಸಂದರ್ಭದಲ್ಲಿ ಹೇಳಿದರು.

ಅದೇ ವೇಳೆ, ಅಮೆರಿಕದ ಉನ್ನತ ರಾಜತಾಂತ್ರಿಕರ ತೈವಾನ್ ಭೇಟಿಯನ್ನು ಚೀನಾ ಖಂಡಿಸಿದೆ. ಅಮೆರಿಕವು ಈ ವಲಯದ ಶಾಂತಿ ಮತ್ತು ಸ್ಥಿರತೆಯನ್ನು ಅಪಾಯಕ್ಕೆ ಗುರಿಪಡಿಸುತ್ತಿದೆ ಎಂದು ಚೀನಾ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News