ಲೆಬನಾನ್: ಪ್ರತಿಭಟನಕಾರರಿಂದ ಕಲ್ಲು ತೂರಾಟ; ಪೊಲೀಸರಿಂದ ಅಶ್ರುವಾಯು

Update: 2020-08-10 16:25 GMT

ಬೈರೂತ್ (ಲೆಬನಾನ್), ಆ. 10: ಕಳೆದ ವಾರದಲ್ಲಿ ಲೆಬನಾನ್ ರಾಜಧಾನಿ ಬೈರೂತ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದ ಹಿನ್ನೆಲೆಯಲ್ಲಿ ಸರಕಾರದ ನಿಷ್ಕ್ರಿಯತೆಯನ್ನು ಖಂಡಿಸಿ ಜನರು ಬೈರೂತ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಯು ರವಿವಾರ ಎರಡನೇ ದಿನಕ್ಕೆ ಕಾಲಿರಿಸಿದೆ.

ರಾಜಧಾನಿಯ ಮಧ್ಯ ಭಾಗದಲ್ಲಿರುವ ಸಂಸತ್ ಕಟ್ಟಡದ ಸಮೀಪ ಜಮಾಯಿಸಿದ ಪ್ರತಿಭಟನಕಾರರು, ಸಂಸತ್‌ಗೆ ಹೋಗುವ ರಸ್ತೆಯೊಂದನ್ನು ಮುಚ್ಚಿದರು. ಬಳಿಕ, ಪ್ರತಿಭಟನಕಾರರು ಕಲ್ಲು ತೂರಾಟ ಆರಂಭಿಸಿದಾಗ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಅವರನ್ನು ಚದುರಿಸಲು ಪ್ರಯತ್ನಿಸಿದರು.

ಪ್ರತಿಭಟನಕಾರರು ಸಂಸತ್ ಕಟ್ಟಡವನ್ನು ಪ್ರವೇಶಿಸದಂತೆ ತಡೆಯಲು ಪೊಲೀಸರು ತಡೆಬೇಲಿಗಳನ್ನು ನಿರ್ಮಿಸಿದ್ದರು. ಅದನ್ನು ಮುರಿದು ಒಳನುಗ್ಗಲು ಪ್ರತಿಭಟನಕಾರರು ಪ್ರಯತ್ನಿಸುತ್ತಿದ್ದಾಗ ಸಂಸತ್ ಚೌಕದ ದ್ವಾರವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಪ್ರತಿಭಟನಕಾರರು ವಸತಿ ಮತ್ತು ಸಾರಿಗೆ ಸಚಿವಾಲಯಗಳ ಕಚೇರಿಗಳಿಗೂ ನುಗ್ಗಲು ಪ್ರಯತ್ನಿಸಿದರು.

ಮಂಗಳವಾರ ಬೈರೂತ್ ಬಂದರಿನ ಗೋದಾಮೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಸುಮಾರು 2,700 ಟನ್ ಅಮೋನಿಯಂ ನೈಟ್ರೇಟ್ ರಾಸಾಯನಿಕವು ಸ್ಫೋಟಿಸಿದಾಗ 158 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 6,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ಜನರು, ‘ನಿಷ್ಕ್ರಿಯ’ ಸರಕಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬೀದಿಗಿಳಿದಿದ್ದಾರೆ. ಈಗಾಗಲೇ, ಸರಕಾರದ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ.

2,200 ಕೋಟಿ ರೂ. ನೆರವು: ಜಾಗತಿಕ ನಾಯಕರ ಭರವಸೆ

ಭೀಕರ ಸ್ಫೋಟದಿಂದ ಜರ್ಝರಿತಗೊಂಡಿರುವ ಲೆಬನಾನ್‌ಗೆ 250 ಮಿಲಿಯ ಯುರೋ (ಸುಮಾರು 2,200 ಕೋಟಿ ರೂಪಾಯಿ)ಗೂ ಅಧಿಕ ಪರಿಹಾರ ಮೊತ್ತವನ್ನು ನೀಡುವುದಾಗಿ ಜಾಗತಿಕ ನಾಯಕರು ರವಿವಾರ ಭರವಸೆ ನೀಡಿದ್ದಾರೆ ಎಂದು ಅಶರೀರ ಸಮ್ಮೇಳನವನ್ನು ಸಂಘಟಿಸಿರುವ ಫ್ರಾನ್ಸ್ ತಿಳಿಸಿದೆ. ತುರ್ತು ನೆರವನ್ನು ಸ್ಫೋಟದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ‘ನೇರವಾಗಿ’ ನೀಡಲಾಗುವುದು ಎಂದು ಅದು ಹೇಳಿದೆ.

ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಮತ್ತು ವಿಶ್ವಸಂಸ್ಥೆ ಏರ್ಪಡಿಸಿದ ಈ ಅಶರೀರ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ 15 ಸರಕಾರಿ ಮುಖ್ಯಸ್ಥರು ಭಾಗವಹಿಸಿದರು. ಸಂಕಷ್ಟಕ್ಕೀಡಾಗಿರುವ ಲೆಬನಾನ್ ಜನತೆಯ ಜೊತೆ ನಾವಿದ್ದೇವೆ ಎಂಬುದಾಗಿ ಈ ನಾಯಕರು ಘೋಷಿಸಿದರು ಹಾಗೂ ಮುಂದಿನ ದಿನಗಳು ಮತ್ತು ವಾರಗಳಲ್ಲಿ ‘ಮಹತ್ವದ ಸಂಪನ್ಮೂಲಗಳನ್ನು’ ಕಲೆ ಹಾಕುವ ಭರವಸೆಯನ್ನು ಅವರು ನೀಡಿದರು.

ಅವಶೇಷಗಳಡಿ ಸಿಲುಕಿದವರು ಬದುಕುವ ಸಾಧ್ಯತೆ ಕ್ಷೀಣ

ಮಂಗಳವಾರದ ಸ್ಫೋಟದ ಬಳಿಕ, ಕನಿಷ್ಠ 21 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ ಎಂದು ಲೆಬನಾನ್ ಸೇನೆ ರವಿವಾರ ತಿಳಿಸಿದೆ ಹಾಗೂ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವವರು ಬದುಕಿರುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂದಿದೆ.

‘‘ಹಿಂಸಾಚಾರವಾಗಲಿ, ಅರಾಜಕತೆಯಾಗಲಿ ನೆಲೆಸದಂತೆ ಖಾತರಿಪಡಿಸಲು ನಾವೆಲ್ಲರೂ ಈಗ ಜೊತೆಯಾಗಿ ಕೆಲಸ ಮಾಡಬೇಕಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.

ಅದೇ ವೇಳೆ, ಶಾಂತಿ ಕಾಪಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News