ಖಾಸಗಿ ಮೇಳಗಳಿಂದ ಸಂಪೂರ್ಣ ವೇತನ ನೀಡದೆ ಅನ್ಯಾಯ : ಉಡುಪಿಯ ಯಕ್ಷಗಾನ ಕಲಾವಿದರುಗಳ ಆರೋಪ

Update: 2020-08-10 17:03 GMT

ಉಡುಪಿ, ಆ.10: ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಯಕ್ಷಗಾನ ಮೇಳಗಳ ಕಲಾವಿದರಿಗೆ ಸಂಪೂರ್ಣ ವೇತನವನ್ನು ನೀಡಲಾಗಿದೆ. ಆದರೆ ಜಿಲ್ಲೆಯ ಒಟ್ಟು 12 ಖಾಸಗಿ ಮೇಳಗಳ ಸಾವಿರಾರು ಕಲಾವಿದರಿಗೆ ಇನ್ನು ಕೂಡ ವೇತನ ನೀಡದೆ ಅನ್ಯಾಯ ಎಸಗಲಾಗಿದೆ ಎಂದು ವಿವಿಧ ಮೇಳಗಳ ನೊಂದ ಯಕ್ಷಗಾನ ಕಲಾವಿದರುಗಳು ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌಕೂರು ಮೇಳದ ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗ, ಪ್ರತಿವರ್ಷ ಕಲಾವಿದರು 180ದಿನಕ್ಕೆ ಒಪ್ಪಂದ ಮಾಡಿಕೊಂಡರೂ 200 ದಿನ ಕೆಲಸ ಮಾಡು ತ್ತಾರೆ. ಆದರೆ ಯಜಮಾನರು ಅದಕ್ಕೆ ಹೆಚ್ಚುವರಿ ಸಂಬಳ ನೀಡು ವುದಿಲ್ಲ. ಅದೇ ರೀತಿ ಈ ಬಾರಿ ಕೂಡ 180 ದಿನಕ್ಕೆ ಒಪ್ಪಂದ ಮಾಡಿದರೂ ಕೊರೋನ ಹಿನ್ನೆಲೆಯಲ್ಲಿ 120 ದಿನಗಳ ವೇತನವನ್ನು ಮಾತ್ರ ನೀಡಿದ್ದಾರೆ. ಉಳಿದ ದಿನದ ವೇತನವನ್ನು ನೀಡಿಲ್ಲ ಎಂದು ದೂರಿದರು.

ಇಲಾಖೆಯ ಅಧೀನದಲ್ಲಿ ನಡೆಯುವ ಮಂದರ್ತಿ, ಮಾರಣಕಟ್ಟೆ, ಕಮಲ ಶಿಲೆ, ಕೋಟ ಅಮೃತೇಶ್ವರಿ ಮೇಳಗಳ ಕಲಾವಿದರಿಗೆ ಈಗಾಗಲೇ ಪೂರ್ಣ ಮೊತ್ತವನ್ನು ನೀಡಲಾಗಿದೆ. ಆದರೆ ಖಾಸಗಿ ಮೇಳಗಳಾದ ಸೌಕೂರು, ಹಿರಿ ಯಡ್ಕ, ನೀಲಾವರ, ಪೆರ್ಡೂರು, ಹಟ್ಟಿಯಂಗಡಿ, ಗೋಳಿಗರಡಿ, ಹಾಲಾಡಿ, ಮಡಾಮಕ್ಕಿ, ಮಾರಣಕಟ್ಟೆ, ಆರ್ಜಿ, ಸಿಗಂದೂರು, ಸಿತೂರು ಮೇಳಗಳ ಕಲಾವಿದರಿಗೆ ಪೂರ್ಣ ವೇತನ ನೀಡಿಲ್ಲ. ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೀಡಿರುವ ಭರವಸೆ ಈವರೆಗೆ ಈಡೇರಿಲ್ಲ ಎಂದರು.

ಧಾರ್ಮಿಕ ದತ್ತಿ ಇಲಾಖೆಯಿಂದ, ಮೇಳಗಳ ದೇವಸ್ಥಾನದಿಂದ ಅಥವಾ ಮೇಳಗಳ ಯಜಮಾನರಿಂದಲೂ ನಮಗೆ ಯಾವುದೇ ಸಹಾಯ ದೊರೆತಿಲ್ಲ. ಈ ಬಗ್ಗೆ ಈ ವಿಚಾರವನ್ನು ಸಂಬಂಧಪಟ್ಟವರ ಗಮನಕ್ಕೆ ತಂದರೂ ಸರಕಾರದ ನಿರ್ಲಕ್ಷ ತೀವ್ರ ನೋವು ಉಂಟು ಮಾಡಿದೆ. ಪ್ರತಿ ಮೇಳಗಳು ದೇವಸ್ಥಾನದ ವತಿಯಿಂದ ನಡೆಯುತ್ತಿದ್ದು, ಇದರಿಂದ ದೇವಸ್ಥಾನಕ್ಕೆ ಪ್ರಚಾರ, ಲಾಭವೂ ಇದೆ. ಆದುದರಿಂದ ದೇವಸ್ಥಾನಗಳು ಕಲಾವಿದರ ನೆರವಿಗೆ ಆಗಮಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಲಿಗ್ರಾಮ ಮೇಳದ ಶಶಿಕಾಂತ್ ಶೆಟ್ಟಿ ಕಾರ್ಕಳ, ನೀಲಾವರ ಮೇಳದ ರಾಘವೇಂದ್ರ ಶೆಟ್ಟಿ, ಹಾಲಾಡಿ ಮೇಳದ ಗಣೇಶ್ ಬಳೆ ಗಾರ, ಗೋಪಾಲ ಪೂಜಾರಿ ಬ್ರಹ್ಮಾವರ, ನಾರಾಯಣ ಉಳ್ಳೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News