ಕಾಪು ತಾ. ಪಂ. : ಘೋಷಣೆಯಾಗದ ಅಧ್ಯಕ್ಷ, ಉಪಾಧ್ಯಕ್ಷರು

Update: 2020-08-10 18:19 GMT

ಕಾಪು :  ಕುತೂಹಲ ಕೆರಳಿಸಿದ ಕಾಪು ತಾಲೂಕು ಪಂಚಾಯತ್‍ನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆ ಸೋಮವಾರ ನಡೆದರೂ ಹೈಕೋರ್ಟ್‍ನ ಆದೇಶದಂತೆ ಘೋಷಣೆಯಾಗದೆ ಬಾಕಿಯಾಗಿದೆ.

ಕಾಂಗ್ರೆಸ್ 7ಹಾಗೂ ಬಿಜೆಪಿ 5 ಸದಸ್ಯರು ಸೇರಿ 12 ಸದಸ್ಯ ಬಲದ ಕಾಪು ತಾಲ್ಲೂಕು ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನವು  ಹಿಂದುಳಿದ ವರ್ಗ ಬಿ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಈ ಆದೇಶದಂತೆ ಬಿಜೆಪಿಯ  ಅಭ್ಯರ್ಥಿ ಶಶಿಪ್ರಭಾ ಶೆಟ್ಟಿ ಆಯ್ಕೆ ಖಚಿತವಾಗಿತ್ತು. ಈ ಮಧ್ಯೆ ಚುನಾವಣಾಧಿಕಾರಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಅವರ ನೊಟೀಸ್‍ನಲ್ಲಿ ಹಿಂದುಳಿದ ವರ್ಗ ಅ ಮಹಿಳೆ ಅಭ್ಯರ್ಥಿ ಇಲ್ಲದ ಪಕ್ಷದಲ್ಲಿ ಬಿ ಮಹಿಳೆ ಅಭ್ಯರ್ಥಿ ಆಯ್ಕೆಗೆ ಅವಕಾಶವಿದೆ ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಈ ನೋಟೀಸ್ ಪ್ರಶ್ನಿಸಿ  ಕಾಂಗ್ರೆಸ್ ಪಕ್ಷ ಹೈಕೋರ್ಟ್‍ಗೆ ಮೆಟ್ಟಿಲೇರಿತ್ತು.

ಈ ಮೀಸಲಿನಂತೆ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಶಶಿಪ್ರಭಾ ಶೆಟ್ಟಿ ಮತ್ತು ಕಾಂಗ್ರೆಸ್ ನಿಂದ ರೇಣುಕಾ ಪುತ್ರನ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕೇಶವ ಮೊಯ್ಲಿ, ಕಾಂಗ್ರೆಸ್‍ನಿಂದ ಯು. ಸಿ. ಶೇಖಬ್ಬ ಅವರು ನಾಮಪತ್ರ ಸಲ್ಲಿಸಿದ್ದರು.

ಸೋಮವಾರ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಚುನಾವಣಾ ಫಲಿತಾಂಶ ಘೋಷಣೆಗೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿರು ವುದರಿಂದ ಮುಂದಿನ ಆದೇಶದವರೆಗೆ ಫಲಿತಾಂಶ ಘೋಷಣೆಯನ್ನು ತಡೆಹಿಡಿಯಲಾಗಿದೆ ಎಂದು ಸಹಾಯಕ ಕಮೀಷನರ್ ಕೆ. ರಾಜು ತಿಳಿಸಿದರು.

ಕಾಪು ಪುರಸಭಾ ಸಭಾಂಗಣದಲ್ಲಿ ಚುನಾವಣೆ ನಡೆದಿತ್ತು. ಎರಡೂ ಪಕ್ಷದ ಮುಖಂಡರು ಚುನಾವಣಾ ಸಭಾಂಗಣದ ಹೊರಗೆ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದರು. ಆದರೆ ಅಧ್ಯಕ್ಷ, ಉಪಾಧ್ಯಕ್ಷ ಘೋಷಣೆಯಾಗದ ಹಿನ್ನಲೆಯಲ್ಲಿ ವಾಪಾಸಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News