ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತ ತಡೆಗಟ್ಟಲು ಜಿಯೋ ಮ್ಯಾಪಿಂಗ್: ಸಚಿವ ಬೊಮ್ಮಾಯಿ

Update: 2020-08-11 08:15 GMT

ಉಡುಪಿ, ಆ.11: ಪಶ್ಚಿಮ ಘಟ್ಟದಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಸಂಭವಿಸುವ ಭೂಕುಸಿತದಂತಹ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯಿಂದ ಜಿಯೋ ಮ್ಯಾಪಿಂಗ್ ಮೂಲಕ ಸರ್ವೇ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪಡುಬಿದ್ರೆ ಬೀಚ್‌ನಲ್ಲಿ ಕಡ್ಕೊರೆತದಿಂದ ಆಗಿರುವ ಹಾನಿಯನ್ನು ಮಂಗಳವಾರ ವೀಕ್ಷಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಪ್ರಧಾನ ಮಂತ್ರಿ ಜೊತೆ ಆ.10ರಂದು ನಡೆದ ವಿಡಿಯೋ ಕಾನ್ಫೆರೆನ್ಸ್ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಡಲ್ಕೊರೆತ ನಿಯಂತ್ರಿಸಲು ಹೆಚ್ಚಿನ ಅನುದಾನ ನೀಡಬೇಕು ಹಾಗೂ ಪಶ್ಚಿಮ ಘಟ್ಟದಲ್ಲಿ ಭೂಕುಸಿತ ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕು ಮತ್ತು ಅಂತಹ ಸ್ಥಳಗಳಲ್ಲಿರುವ ಮನೆಗಳನ್ನು ಸ್ಥಳಾಂತರ ಮಾಡಿ ಪುನವರ್ಸತಿ ಕಲ್ಪಿಸಬೇಕು ಎಂಬ ಬೇಡಿಕೆ ಪ್ರಸ್ತಾಪಿಸಲಾಗಿದೆ ಎಂದರು.

ಕೊರೋನ ಮತ್ತು ನೆರೆಗೆ ಸಂಬಂಧಿಸಿ ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಈಗಾಗಲೇ ಕೊರೋನಗೆ ರಾಜ್ಯ ಸರಕಾರ ಎನ್‌ಡಿಆರ್‌ಎಫ್ ನಿಧಿಯಿಂದ 350 ಕೋಟಿ ರೂ. ಖರ್ಚು ಮಾಡುತ್ತಿದೆ. ನೆರೆ ಪರಿಹಾರಕ್ಕೂ ಯಾವುದೇ ರೀತಿ ಹಣ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದಿಂದ ಒಟ್ಟು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಮಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿವೆ. ಅದರ ಜೊತೆ 15 ಫೈಯರ್ ಫೋರ್ಸ್ ಯುನಿಟ್‌ಗಳನ್ನು ರಚಿಸಿ, ಜಿಲ್ಲಾಡಳಿತ ಸಹಕಾರ ನೀಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದವರು ಹೇಳಿದರು.

ಈ ಬಾರಿಯ ಸ್ವಾತಂತ್ರೋತ್ಸವವನ್ನು ಕೇಂದ್ರ ಸರಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ಆಚರಿಸಲಾಗುವುದು. ಈ ಆಚರಣೆಯಲ್ಲಿ ಧ್ವಜಾರೋಹಣ ಮಾತ್ರ ನೆರವೇರಿಸಲಾಗುವುದು. ಉಳಿದಂತೆ ಪೆರೇಡ್‌ಗಳು ಹಾಗೂ ಸೆಲ್ಯೂಟ್‌ಗಳು ಇರುವುದಿಲ್ಲ. ಅದೇರೀತಿ ಸಾರ್ವಜನಿಕರಿಗೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ತಿಳಿಸಿದರು.

ಉಡುಪಿ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ
ಪ್ರಾಕೃತಿಕ ವಿಕೋಪ ನಿಧಿಗೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಖಾತೆಯಲ್ಲಿ ಈಗಾಗಲೇ ಸುಮಾರು 3.5 ಕೋಟಿ ರೂ. ಇದ್ದು, ಮುಂದಿನ ಎರಡು ಮೂರು ದಿನಗಳಲ್ಲಿ ತುರ್ತು ಕಾಮಗಾರಿ ಹಾಗೂ ಪ್ರವಾಹ ಪರಿಹಾರಕ್ಕಾಗಿ ಎನ್‌ಡಿಆರ್‌ಎಫ್‌ನಿಂದ 10 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News